Breaking News

ಚಿಕ್ಕೋಡಿ: ಮಳೆಯ ಆರ್ಭಟ ಕಡಿಮೆಯಾದರೂ ತಗ್ಗದ ಕೃಷ್ಣೆಯ ಒಳಹರಿವು

Spread the love

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರ ಪಶ್ಚಿಮಘಟ್ಟ ಹಾಗೂ ಕೃಷ್ಣಾನದಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಗಣನೀಯವಾಗಿ ಕಡಿಮೆಯಾದರೂ ರಾಜ್ಯಕ್ಕೆ ಇನ್ನೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನಾಲ್ಕು ಅಡಿಯಷ್ಟು ಕೃಷ್ಣಾನದಿ ಏರಿಕೆ ಕಂಡಿದ್ದು, ನದಿ ಪಾತ್ರದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು, ಹಲವು ಸೇತುವೆಗಳು ಜಲಾವೃತವಾಗಿವೆ. 

ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ ರಾಯಬಾಗ, ಅಥಣಿ, ಕಾಗವಾಡ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ವೇದಗಂಗಾ, ದೂದ್ ಗಂಗಾ, ಹಿರಣ್ಯಕೇಶಿ, ಪಂಚಗಂಗಾ ಕೃಷ್ಣ ನದಿಗಳಲ್ಲಿ ಒಳಹರಿವಿನಲ್ಲಿ ಗಣನೀಯವಾಗಿ ಹೆಚ್ಚಿದ್ದರಿಂದ ನದಿ ತನ್ನ ಒಡಲುಗಳನ್ನು ಬಿಟ್ಟು ಕೃಷಿ ಜಮೀನುಗಳಲ್ಲಿ ಹರಿಯುತ್ತಿದೆ. ಹಲವು ಗ್ರಾಮಗಳಿಗೆ ವೇದಗಂಗಾ ನೀರು ನುಗ್ಗಿದ್ದು, ನೆರೆ ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ಬೆಳಗಾವಿ ಜಿಲ್ಲಾಡಳಿತ ರವಾನಿಸಿದೆ. ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ತಮ್ಮ ಜಾನುವಾರಗಳ ಜೊತೆಗೆ ಎತ್ತರ ಪ್ರದೇಶಕ್ಕೆ ತೆರಳಿದ್ದಾರೆ. 

ಕೃಷ್ಣಾನದಿ ನೀರಿನ ಒಳಹರಿವಿನಲ್ಲಿ ಪ್ರತಿ ಗಂಟೆಗೆ ಹೆಚ್ಚಳವಾಗುತ್ತಿದೆ. ನದಿ ಪಾತ್ರ ಬಿಟ್ಟು ನೀರು ಹೊರಗೆ ಬಂದಿದ್ದು ಬಾವನಸೌದತ್ತಿಯ ಸುಗಂಧಾದೇವಿ ದೇವಸ್ಥಾನ ಸಂಪೂರ್ಣ ಮುಳುಗಿದೆ. ಸದ್ಯ 2 ಲಕ್ಷ 17 ಸಾವಿರ ಕ್ಯೂಸೆಕ್​ ಒಳ ಹರಿವು ಇದ್ದು, ಕ್ಷಣ ಕ್ಷಣಕ್ಕೂ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹಾಗಾಗಿ ಜನರಲ್ಲಿ ಆತಂಕ ಶುರುವಾಗಿದೆ. ಇನ್ನು 3 ಅಡಿ ನೀರು ಹೆಚ್ಚಳವಾದಲ್ಲಿ ಮನೆಗಳಿಗೆ ನೀರು ನುಗ್ಗಬಹುದು ಎನ್ನುತ್ತಾರೆ ಸ್ಥಳೀಯರು. 

ಚಿಕ್ಕೋಡಿ ಉಪ ವಿಭಾಗದ 12 ಪ್ರಮುಖ ಸೇತುವೆಗಳು ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಕುಡಚಿ-ಉಗಾರ ರಾಜ್ಯ ಹೆದ್ದಾರಿ ಹಾಗೂ ಭಿರಡಿ ಚಿಂಚಲಿ ಮಧ್ಯದ ಸೇತುವೆ ಜಲಾವೃತವಾಗಿವೆ. ಅಲ್ಲದೇ, ಮಹಾರಾಷ್ಟ್ರಕ್ಕೆ ಸಂಪರ್ಕ ಕೊಂಡಿಯಾಗಿರುವ ಸದಲಗಾ-ಬೋರಗಾ, ಮಲ್ಲಿಕವಾಡ-ದತ್ತವಾಡ, ಯಕ್ಸಂಬಾ-ದಾನವಾಡ ಸೇತುವೆಗಳು ಕೂಡ ಜಲಾವೃತವಾಗಿವೆ. ಮತ್ತೊಂದೆಡೆ ಹುನ್ನರಗಿ ಗ್ರಾಮಕ್ಕೆ ವೇದಗಂಗಾ ನದಿ ನೀರು ನುಗ್ಗಿದ್ದರಿಂದ 20ಕ್ಕೂ ಹೆಚ್ಚು ಕುಟುಂಬಗಳನ್ನು ಜಿಲ್ಲಾಡಳಿತ ಕಾಳಜಿ ಕೇಂದ್ರಕ್ಕೆ ರವಾನಿಸಿದೆ.


Spread the love

About Laxminews 24x7

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ