ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವೇ ಆಗಲಿದ್ದು, ಈ ಬಾರಿಯೂ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದ್ದಾನೆ.
ಆರನೇ ಬಾರಿ ಅಂಬಾರಿ ಹೊರಲು ಅಭಿಮನ್ಯು ಸನ್ನದ್ಧ: 2025ರ ದಸರಾ ಮಹೋತ್ಸವದ ವಿಜಯ ದಶಮಿಯಲ್ಲಿ ಅಭಿಮನ್ಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದರೆ, ಒಟ್ಟು 6 ಬಾರಿ ಅಂಬಾರಿ ಹೊತ್ತಂತಾಗುತ್ತದೆ. ಅಭಿಮನ್ಯುವಿಗೆ ಅಂಬಾರಿ ತಾಲೀಮು ನಡೆಸುವಂತೆ ಉಳಿದ ಆನೆಗಳಾದ ಮಹೇಂದ್ರ, ಧನಂಜಯ, ಏಕಲವ್ಯ, ಪ್ರಶಾಂತ ಆನೆಗಳಿಗೂ ಅಷ್ಟೇ ತೂಕದ ಭಾರದ ಮರಳು ಮೂಟೆ, ಮರದ ಅಂಬಾರಿ ಹಾಕಿ ತಾಲೀಮು ನೀಡಲಾಗುವುದು.
4,920 ಕೆ.ಜಿ.ತೂಕ ಹೊಂದಿರುವ ವೀರ ಅಭಿಮನ್ಯು: ಅಭಿಮನ್ಯು ಶಾಂತ ಹಾಗೂ ಪರಾಕ್ರಮಿಯಾಗಿದ್ದು, ಈತನ ಮೇಲೆ ಅಪಾರ ನಿರೀಕ್ಷೆಯನ್ನು ಅಭಿಮಾನಿಗಳು ಚಾಮುಂಡೇಶ್ವರಿ ಭಕ್ತರು ಇಟ್ಟುಕೊಂಡಿದ್ದಾರೆ. ಮತ್ತಿಗೋಡು ಆನೆ ಶಿಬಿರದ 59 ವರ್ಷದ ಅಭಿಮನ್ಯು, 2.672 ಮೀಟರ್ ಎತ್ತರ, 3.51 ಮೀಟರ್ ಉದ್ದ, 4,920 ಕೆ.ಜಿ.ತೂಕ ಹೊಂದಿದ್ದಾನೆ.
ಒನ್ಯಮೃಗಗಳ ಸೆರೆ ಹಿಡಿಯುವಲ್ಲಿ ಈತನ ಪಾತ್ರ ಬಹುಮುಖ್ಯ: ಅಭಿಮನ್ಯುವನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ವಿಶೇಷ ಗುಣವೆಂದರೆ ಕಾಡಾನೆಗಳನ್ನು ಸೆರೆಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಹೆಚ್ಚಾಗಿ ತೊಡಗಿದ್ದಾನೆ. ಈ ಹಿಂದೆ 140 ರಿಂದ 150 ಕಾಡಾನೆಗಳನ್ನು ಮತ್ತು 40 ರಿಂದ 50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ.
5 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾನೆ. ಮಾವುತ ಜೆ.ಎಸ್. ವಸಂತ, ಕಾವಾಡಿ ಜೆ.ಕೆ. ರಾಜು, ಅಭಿಮನ್ಯುನನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಅಂಬಾರಿ ಹೊರುವ ಆನೆಗಳ ಕುರಿತು ಮಾತನಾಡಿದ ಡಿಸಿಎಫ್ (ವನ್ಯಜೀವಿ ವಿಭಾಗ) ಡಾ.ಐ.ಬಿ. ಪ್ರಭುಗೌಡ, “ಈ ಬಾರಿಯು ಅಭಿಮನ್ಯುನೇ ಅಂಬಾರಿ ಹೊರಲಿದ್ದಾರೆ. ಅದರ ಜೊತೆಯಲ್ಲಿ ಧನಂಜಯ, ಏಕಲವ್ಯ, ಪ್ರಶಾಂತ, ಮಹೇಂದ್ರ ಆನೆಗಳಿಗೂ ಭಾರ ಹೊರುವ ತಾಲೀಮು ನೀಡಲಾಗುವುದು. ಆದರೆ, ಮುಂದಿನ ದಸರಾಗೆ ಯಾವ ಆನೆ ಅಂಬಾರಿ ಹೊರಬೇಕು ಅಂತ ಸಮಿತಿ ನೀಡಲಿದೆ. ಊಹಪೋಹ ಮಾಹಿತಿ ನೀಡಬಾರದು. ಹೊಸ ಆನೆಗಳಾದ ರೂಪ, ಹೇಮವತಿ, ಶ್ರೀಕಂಠ ಬರಲಿದೆ. ಎಲ್ಲ ಆನೆಗಳ ಮೇಲೆ ನಿಗಾ ಇಡಲಾಗಿದೆ” ಎಂದು ಮಾಹಿತಿ ನೀಡಿದರು.
Laxmi News 24×7