ಬೆಂಗಳೂರು: ನೀನು ಬೆಂಗಳೂರು ಉಸ್ತುವಾರಿ ಮಂತ್ರಿ. ಇಲ್ಲಿನ ನಿನ್ನ ಸಿಂಗಾಪುರ ಮಳೆ ಬಂದರೆ ಕೊಚ್ಚಿ ಹೋಗುತ್ತಿದೆ. ಮೊದಲು ಇಲ್ಲಿ ಅಭಿವೃದ್ಧಿ ಮಾಡು. ಆಮೇಲೆ ಮಿಕ್ಕಿದ್ದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ‘ಜನರೊಂದಿಗೆ ಜನತಾದಳ’ ಎಂಬ ಹೆಸರಿನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಪ್ರವಾಸ ಹಾಗೂ ಮಿಸ್ ಕಾಲ್ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊನ್ನೆ ಮೊನ್ನೆ ನಾವೆಲ್ಲಾ ನೋಡಿದೆವಲ್ಲ, ಮಳೆ ಬಂದಾಗ ಬೆಂಗಳೂರು ಎಂಬ ಸಿಂಗಾಪುರದ ಕಥೆ ಏನಾಯಿತು ಎಂದು? ಸಾಯಿ ಬಡಾವಣೆಯಲ್ಲಿಯೇ ಸಿಂಗಾಪುರ ಕಣ್ಣಿಗೆ ಕಂಡಿತಲ್ಲವೇ? ನಿನ್ನೆ ಯಾದಗಿರಿಯಲ್ಲಿ ಡಿಸಿಎಂ ಅವರ ವೀರಾವೇಷದ ಭಾಷಣ ನೋಡಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡುತ್ತಾರಂತೆ ಎಂದು ವಾಗ್ದಾಳಿ ನಡೆಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಎಷ್ಟು ಅನುದಾನ ನೀಡಿದ್ದೀರಿ? ಎಷ್ಟು ವೆಚ್ಚ ಮಾಡಿದ್ದೀರಿ? ಏನೇನು ಅಭಿವೃದ್ಧಿ ಕೆಲಸಗಳು ಆಗಿವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ. ಆರೋಗ್ಯ ಆವಿಷ್ಕಾರ ಎಂದು ನಮ್ಮ ಸಿಎಂ, ಡಿಸಿಎಂ ಯಾದಗಿರಿಗೆ ಹೋಗಿದ್ದರು. ಕಲ್ಯಾಣ ಕರ್ನಾಟಕದ ಉದ್ಧಾರ ಮಾಡುತ್ತೇವೆ ಎಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಸಂತೋಷ, ಹಾಗಾದರೆ ನಿಮ್ಮ ಪಕ್ಷದ ಆಡಳಿತಾವಧಿಯಲ್ಲಿ, ಅದೂ ಎರಡು ವರ್ಷಗಳ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೀರಿ ಎಂಬುದನ್ನು ಜನರ ಮುಂದೆ ಇಡಿ ಎಂದು ಹೆಚ್ಡಿಕೆ ಆಗ್ರಹಿಸಿದರು.
ದೊಡ್ಡ ದೊಡ್ಡ ಆಸ್ಪತ್ರೆ ಕಟ್ಟಡಗಳಚನ್ನು ಕಟ್ಟುವುದು ಇರಲಿ. ನಿಮ್ಮ ಯೋಗ್ಯತೆಗೆ ಮೊದಲು ಇರುವ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಿ. ವೈದ್ಯರೇ ಇಲ್ಲದೆ ಕೇವಲ ಕಟ್ಟಡ ಕಟ್ಟಿ ಏನು ಪ್ರಯೋಜನ? ಕಟ್ಟಡ ಕಟ್ಟಿ ಕಮೀಷನ್ ಹೊಡೆಯುತ್ತೀರಿ, ಅಷ್ಟೇ ಅಲ್ಲವೇ?. ಗುರುಮಿಟ್ಕಲ್ ಜನರು ಮಲ್ಲಿಕಾರ್ಜುನ ಖರ್ಗೆಯವರನ್ನು ಎಷ್ಟು ವರ್ಷ ಶಾಸಕರನ್ನಾಗಿ ಮಾಡಿದ್ದರು? ಎಷ್ಟು ವರ್ಷ ಅವರು ಮಂತ್ರಿಯಾಗಿದ್ದರು? ಎಷ್ಟು ವರ್ಷ ಪ್ರತಿಪಕ್ಷ ನಾಯಕರಾಗಿದ್ದರು? ಕಲಬುರಗಿಯಿಂದ ಎಷ್ಟು ಅವಧಿಗೆ ಲೋಕಸಭೆ ಸದಸ್ಯರಾದರು? ಈಗ ರಾಜ್ಯಸಭೆ ಪ್ರತಿಪಕ್ಷ ನಾಯಕರು.. ಆದರೂ ಕಲ್ಯಾಣ ಕರ್ನಾಟಕ ಇನ್ನೂ ಅಭಿವೃದ್ಧಿ ಆಗಿಲ್ಲ ಯಾಕೆ? ಇದುವರೆಗೆ ಈ ಭಾಗಕ್ಕೆ ಹಂಚಿಕೆಯಾದ ಅನುದಾನ ಎಲ್ಲಿಗೆ ಹೋಯಿತು? ಆ ದುಡ್ಡು ಯಾರ ಪಾಲಾಯಿತು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಗುರುಮಿಟ್ಕಲ್ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಎಷ್ಟು ವರ್ಷ ಶಾಸಕರಾಗಿದ್ದರು ಎನ್ನುವುದನ್ನು ಎಲ್ಲರೂ ಬಲ್ಲರು. ಹೋಗಲಿ, ಆ ಕ್ಷೇತ್ರಕ್ಕೆ ಏನು ಮಾಡಿದ್ದೀರಿ? ಇವತ್ತಿಗೂ ಆ ಕ್ಷೇತ್ರದಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಕಲ್ಯಾಣ ಕರ್ನಾಟಕವನ್ನು ಬೆಂಗಳೂರು ಮಾಡಬೇಕಂತೆ! ನೀವು ಬೇಕಾದರೆ ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ. ಆದರೆ, ಕಲ್ಯಾಣ ಕರ್ನಾಟಕವನ್ನು ಬೆಂಗಳೂರು, ಮೈಸೂರಿನಂತೆ ಅಭಿವೃದ್ಧಿ ಮಾಡಿ ಎಂದು ಖರ್ಗೆ ಅವರು ಹೇಳಿದ್ದಾರೆ. ಹಾಗಾದರೆ ಇಷ್ಟು ಸುದೀರ್ಘ ಕಾಲ ನೀವು ಮಾಡಿದ್ದೇನು?. ಇಷ್ಟೂ ವರ್ಷ ಬಂದ ಹಣವೆಲ್ಲ ಎಲ್ಲಿ ಹೋಯಿತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತ ಹೇಗಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಕಳೆದು ಎರಡು ವರ್ಷಗಳಲ್ಲಿ ಕೆಪಿಎಸ್ಸಿ ಎಷ್ಟು ನೇಮಕಾತಿಗಳನ್ನು ಮಾಡಿದೆ? ಅಲ್ಲಿ ಏನೆಲ್ಲಾ ಅವಾಂತರಗಳು ನಡೆದಿವೆ. ಅದನ್ನು ತೊಳೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಕೊಳೆಯೇ ಹೋಗಿಲ್ಲವಲ್ಲ. ಬರೀ ಕಸವೇ ತುಂಬಿಕೊಂಡಿದೆ ಎಂದು ಟೀಕಿಸಿದರು