ಬೆಳಗಾವಿ: “ಪಹಲ್ಗಾಮ್ನಲ್ಲಿ ಮೃತಪಟ್ಟ 26 ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ. ಅದಕ್ಕಾಗಿ ಮತ್ತೆ ಕಾಯಬೇಕಾಗುತ್ತದೆ. ಭಾರತ-ಪಾಕ್ ನಡುವೆ ಕದನ ವಿರಾಮದಿಂದಾಗಿ ಯುದ್ಧ ಸ್ಥಗಿತಗೊಂಡಿದೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡಬೇಕು” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
“ಪೂರ್ಣ ಪ್ರಮಾಣದ ಯುದ್ಧ ಆಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಆಗಿಲ್ಲ. ದೇಶವನ್ನು ಯಾವ ರೀತಿ ಕಟ್ಟಬೇಕು ಎನ್ನುವುದು ಮುಂದಿರುವ ಸವಾಲು. 1971ರಲ್ಲಿ ಇಂದಿರಾ ಗಾಂಧಿ ಮಾದರಿಯಲ್ಲಿ ಪಾಕ್ ಕಟ್ಟಿ ಹಾಕಿದ್ದರ ಬಗ್ಗೆ ಬಿಜೆಪಿಯವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಬಿಜೆಪಿಯವರು ಸೇರಿ ಎಲ್ಲರೂ ಯುದ್ಧ ನಿಲ್ಲಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಈಗ ಯುದ್ಧ ನಿಂತಿದೆ. ಹಾಗಾಗಿ, ಏನೂ ಮಾಡಲು ಆಗುವುದಿಲ್ಲ” ಎಂದರು.
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿರುವ ವಿಚಾರದ ಬಗ್ಗೆ ಮಾತನಾಡಿ, “ಅದು ಅಂತಾರಾಷ್ಟ್ರೀಯ ವಿಚಾರ. ಟ್ರಂಪ್ ಯಾಕೆ ಮಧ್ಯಸ್ಥಿಕೆ ವಹಿಸಿದರು ಮತ್ತು ಅವರಿಗೆ ಯಾರು ಮನವಿ ಮಾಡಿಕೊಂಡರು ಎಂಬ ವಿಚಾರ ಒಂದು ದಿನ ಹೊರಗೆ ಬರುತ್ತದೆ. ಅಲ್ಲಿಯವರೆಗೆ ನಾವೆಲ್ಲಾ ಕಾಯಬೇಕು” ಎಂದು ತಿಳಿಸಿದರು.
ಸಂತಿ ಬಸ್ತವಾಡ ಗ್ರಾಮದಲ್ಲಿ ಒಂದು ಸಮುದಾಯದ ಧರ್ಮಗ್ರಂಥ ಸುಟ್ಟ ವಿಚಾರಕ್ಕೆ, “ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಸೀದಿಯವರು ಸಿಸಿಟಿವಿ ಸೇರಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇಂಥ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ. ನಗರದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ನಿರ್ದಿಷ್ಟವಾಗಿ ಯಾವುದಾದರೂ ಪ್ರಕರಣ ಇದ್ದರೆ, ಅವರ ಗಮನಕ್ಕೆ ತರೋಣ” ಎಂದರು.
Laxmi News 24×7