ಚಿಕ್ಕಬಳ್ಳಾಪುರ: ಗಣಿಗಾರಿಕೆ ಮಾಡಲು ರಸ್ತೆ ಮಾಡುವ ವಿಚಾರಕ್ಕೆ ನಡೆದ ಎರಡು ಗುಂಪುಗಳ ಗಲಾಟೆಯಲ್ಲಿ ಗಣಿ ಮಾಲೀಕನು ರೈತನ ಮೇಲೆ ಗುಂಡು ಹಾರಿಸಿರುವ ಆರೋಪ ಕೇಳಿಬಂದಿದೆ. ಪ್ರತಿಭಟನಾಕಾರನ ತೊಡೆ ಭಾಗಕ್ಕೆ ಗುಂಡೇಟು ತಗಲಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಚೇನಹಳ್ಳಿ ತಾಲೂಕಿನ ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಸಮೀಪದ ಬೆಟ್ಟಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ, ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಇಂದು ಮಧ್ಯಾಹ್ನ 1:30ರ ಸಮಯದಲ್ಲಿ ಗಲಾಟೆ ನಡೆದಿದ್ದು, ಗಣಿ ಮಾಲೀಕ ಸ್ಥಳೀಯ ಪ್ರತಿಭಟನಾಕಾರನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಆಗಿದ್ದೇನು? ಬೆಟ್ಟದ ತಪ್ಪಲಲ್ಲಿ ಮುನೇಶ್ವರ ಗುಡಿ, ತಿಮ್ಮರಾಯನಗುಡಿ ಇದೆ, ಶುದ್ಧ ನೀರು ಮತ್ತು ಗಾಳಿಯನ್ನು ನೀಡುತ್ತಿರುವ ಸ್ವಚ್ಛ ಪರಿಸರವಾಗಿದೆ. ಇಂತಹ ಪರಿಸರದಲ್ಲಿ ಗಣಿಗಾರಿಕೆಗಾಗಿ ದಾರಿ ಮಾಡಲು ಸಕಲೇಶ್ ಎಂಬುವರು ಪ್ರಯತ್ನ ನಡೆಸಿದ್ದರು. ಗಣಿ ಲಾರಿಗಳ ಓಡಾಟದಿಂದ ಸ್ವಚ್ಛ ಪರಿಸರ ಹಾಳಾಗುತ್ತದೆ ಎಂಬ ಕಾರಣಕ್ಕೆ ಗಣಿಗಾರಿಕೆ ಮತ್ತು ರಸ್ತೆ ನಿರ್ಮಾಣ ವಿರೋಧಿ ಕಳೆದ ಫೆಬ್ರವರಿಯಲ್ಲಿ ರೈತ ಸಂಘ ಮತ್ತು ಮಂಚೇನಹಳ್ಳಿ ತಾಲೂಕು ಪರಿಸರ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ಬುಧವಾರ (ಏಪ್ರಿಲ್ 23) ಮಧ್ಯಾಹ್ನ ಗಣಿ ಮಾಲೀಕರಾದ ಸಕಲೇಶ್ ಜೆಸಿಬಿಗಳಿಂದ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ವೇಳೆ ರೈತ ರವಿ ಸೇರಿದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತ್ತಿದ್ದಾರೆ, ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಈ ವೇಳೆ ಸಕಲೇಶ್ ಗನ್ನಿಂದ ರವಿ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ನಡೆಸಿದ್ದರಿಂದ ರೈತರು ಸ್ಥಳದಿಂದ ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಸಂಬಂಧಿಸಿದಂತೆ ಮಾತನಾಡಿದ ಗಾಯಾಳು, ಅಧಿಕಾರಿಗಳು ಮತ್ತು ಪೊಲೀಸರಿಗೆ ಲಂಚ ಕೊಟ್ಟು ರಸ್ತೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದೇನೆ ಎಂದು ಹೇಳಿ ನಮ್ಮ ಮೇಲೆ ದರ್ಪ ತೋರಿಸಿದ್ದಾರೆ. ರಸ್ತೆ ನಿರ್ಮಾಣ ಜಾಗದಲ್ಲಿ ನನ್ನ ಜಮೀನಿದ್ದು, ಪೋಡಿಯಾದ ನಂತರ ರಸ್ತೆ ನಿರ್ಮಾಣ ಮಾಡುವಂತೆ ಹೇಳಿದ್ರು, ಬಂದೂಕಿನಿಂದ ನನ್ನ ಮೇಲೆ ಗುಂಡು ಹಾರಿಸಿದ್ದಾನೆಂದು ಆರೋಪ ಮಾಡಿದ್ದಾರೆ.
Laxmi News 24×7