Breaking News

ಸವದತ್ತಿ ಗುಡ್ಡದ ಮೇಲಿಂದ ಉರುಳಿದ ಬಂಡೆಗಳು ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ ಸಾವು, ಸಂಭ್ರಮ ಮನೆಯಲ್ಲಿ ಶೋಕ

Spread the love

ಬೆಳಗಾವಿ: ಗರಸು ತೆಗೆಯುವಾಗ ಗುಡ್ಡದ ಮೇಲಿನ ಬೃಹತ್‌ ಬಂಡೆಗಳು ಉರುಳಿ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.‌ ಘಟನೆಯಲ್ಲಿ 1 ಜೆಸಿಬಿ ಹಾಗೂ ಟ್ರ್ಯಾಕ್ಟರ್‌ ಕೂಡ ಸಂಪೂರ್ಣ ನಜ್ಜುಗುಜ್ಜಾಗಿವೆ.

ಯಡ್ರಾವಿ ಗ್ರಾಮದ ಅರ್ಜುನ ಚುಳಕಿ (50) ಮಣ್ಣಿನಡಿ ಸಿಲುಕಿ ಮೃತ ವ್ಯಕ್ತಿ. ಗುರುವಾರ ಬೆಳಗ್ಗೆ ಮಣ್ಣಿನಡಿ ಸಿಲುಕಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ.

ಮಕ್ಕಳ ಮದುವೆ ಸಿದ್ಧತೆಯಲ್ಲಿದ್ದ ಅರ್ಜುನ: ಇದೇ ಶನಿವಾರ ಅರ್ಜುನ ಅವರ ಸಹೋದರನ ಇಬ್ಬರು ಮಕ್ಕಳ‌ ಮದುವೆ ನಿಶ್ಚಯವಾಗಿತ್ತು. ಮದುವೆ ಹಿನ್ನೆಲೆ ಮನೆಯ ಮುಂದೆ ಪೆಂಡಾಲು ಕೂಡ ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ‘ಮದುವೆ ಹಿನ್ನೆಲೆ ಪೆಂಡಾಲ್ ಕೆಳಗಿನ ನೆಲವನ್ನು‌ ಸಮತಟ್ಟು ಮಾಡಲು ಅರ್ಜುನ ಅವರು ಗರಸು ತರಲು ಹೋಗಿದ್ದರು. ಮೊದಲು ಒಂದು ಟ್ರಿಪ್ ಟ್ರ್ಯಾಕ್ಟರಿನಲ್ಲಿ‌ ತಂದು ಹಾಕಿದ್ದರು. ಮತ್ತೊಂದು ಟ್ರಿಪ್ ತರಲು ಹೋದಾಗ ಈ ಅವಘಡ ಸಂಭವಿಸಿದೆ’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬುಧವಾರ ರಾತ್ರಿ 10.30ರ ಸುಮಾರಿಗೆ ಗುಡ್ಡದ ಪಕ್ಕದಲ್ಲಿ ಜೆಸಿಬಿ ಬಳಸಿ ಗರಸು ಅಗೆಯಲಾಗುತ್ತಿತ್ತು. ಈ ವೇಳೆ ಏಕಾಏಕಿ ಬೃಹತ್‌ ಬಂಡೆಗಳು ಗುಡ್ಡದ ಮೇಲಿಂದ ಉರುಳಿ ಬಿದ್ದಿವೆ. ವಿಷಯ ತಿಳಿದ ಕೂಡಲೇ ಸವದತ್ತಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿತ್ತು. ನಜ್ಜುಗುಜ್ಜಾದ ವಾಹನಗಳು ಸಿಕ್ಕವು. ಅರ್ಜುನ ಕೂಡ ಬಂಡೆಗಲ್ಲುಗಳ ಮಧ್ಯೆ ಸಿಲುಕಿದ್ದರು. ಕಾರ್ಯಾಚರಣೆಗೆ ಬೆಳಗ್ಗೆಯವರೆಗೂ ಕಾಯಬೇಕಾಯಿತು. ಬಳಿಕ ಅರ್ಜುನ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ