ಬಳ್ಳಾರಿ : ನಗರದಲ್ಲಿ ಬಿರು ಬೇಸಿಗೆಯ ದಿನಗಳು ಪ್ರಾರಂಭವಾದ ಬೆನ್ನಲ್ಲಿಯೇ, ಮಹಾನಗರಪಾಲಿಕೆ ಹಾಗೂ ಜಲ ಮಂಡಳಿ ಅಧಿಕಾರಿಗಳು ನಾಗರಿಕರಿಗೆ ಶಾಕ್ ನೀಡಿದ್ದು, ಇನ್ನು ಮುಂದೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹವೂ ತೃಪ್ತಿಕರವಾಗಿತ್ತು. ಟಿ. ಬಿ ಡ್ಯಾಂನ ‘ಕ್ರಸ್ಟ್ಗೇಟ್’ಗಳಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋದರೂ ಮತ್ತೆ ಡ್ಯಾಮ್ ಭರ್ತಿಯಾಗಿತ್ತು. ಉತ್ತಮವಾದ ಮಳೆಯಾದ ಕಾರಣ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಸದ್ಯ ಈಗ 21.50 ಟಿಎಂಸಿಯಷ್ಟು ನೀರು ಇದೆ.
ಅಂತೆಯೇ, ಬಳ್ಳಾರಿ ಜನತೆಗೆ ಕುಡಿಯುವ ನೀರು ಪೂರೈಸುವ ಅಲ್ಲೀಪುರ ಮತ್ತು ಮೋಕಾ ಜಲ ಸಂಗ್ರಹಾರಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸಲಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಯಾವುದೇ ತೊಂದರೆಯಾಗುವುದಿಲ್ಲವೇ ಎಂದು ಚುನಾಯಿತ ಪ್ರತಿನಿಧಿಗಳು, ಪಾಲಿಕೆ-ಜಲಮಂಡಳಿ ಅಧಿಕಾರಿಗಳು ಹೇಳುತ್ತಾ ಬಂದಿದ್ದಾರೆ.
ಆದರೆ, ಇದೀಗ ಧಿಡೀರ್ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಏಳು ದಿನಗಳಿಗೆ ಒಮ್ಮೆ ಅಂದರೆ ವಾರಕ್ಕೆ ಒಂದು ಬಾರಿ ಮಾತ್ರ ನೀರು ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ‘ವಾಲ್ವ್ಮನ್’ಗಳೂ ಆಯಾ ಏರಿಯಾಗಳಲ್ಲಿ `ವಾಟ್ಸ್ಆ್ಯಪ್’ ಮೂಲಕ ಹಾಗೂ ಮೌಖಿಕವಾಗಿ ನಾಗರಿಕರಿಗೆ ಈ ವಿಷಯ ತಿಳಿಸುತ್ತಿದ್ದಾರೆ.
Laxmi News 24×7