ನವದೆಹಲಿ: ಭಾರತದಲ್ಲಿ ಅಧಿಕ ರಕ್ತದೊತ್ತಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ 2040ರ ವೇಳೆಗೆ ಸಂಭವಿಸುವ 4.6 ಮಿಲಿಯನ್ ಸಾವು ತಪ್ಪಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಜಾಗತಿಕವಾಗಿ ಅಧಿಕ ರಕ್ತದೊತ್ತಡದಿಂದ ಆಗುತ್ತಿರುವ ಪರಿಣಾಮಗಳ ಕುರಿತು ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಟಿಸಿದೆ. ಮಂಗಳವಾರ ನಡೆದ ಸಾಮಾನ್ಯ ಸಭೆಯ 78ನೇ ಸೆಷನ್ನಲ್ಲಿ ಈ ವರದಿ ಮಂಡಿಸಲಾಯಿತು.
ಭಾರತದಲ್ಲಿ ಹೈ ಬಿಪಿ, ಅಂಕಿಅಂಶಗಳು: ವರದಿಯಲ್ಲಿ, ಭಾರತದಲ್ಲಿ 30-79 ವರ್ಷದ ವಯಸ್ಸಿನ ಅಂದಾಜು 188.3 ಮಿಲಿಯನ್ ಮಂದಿ ಅಧಿಕ ರಕ್ತದೊತ್ತಡದಿಂದ ಜೀವಿಸುತ್ತಿದ್ದಾರೆ ಎಂದು ತಿಳಿಸಿದೆ. ಅಧಿಕ ರಕ್ತದೊತ್ತಡವನ್ನು ಶೇ 50ರಷ್ಟು ನಿಯಂತ್ರಿಸಬೇಕಾದರೆ, ಅಧಿಕ ರಕ್ತದೊತ್ತಡ ಹೊಂದಿರುವ 67 ಮಿಲಿಯನ್ ಮಂದಿಗೆ ಪರಿಣಾಮಕಾರಿ ಚಿಕಿತ್ಸೆ ಅಗತ್ಯ ಎಂದು ಸಲಹೆ ನೀಡಲಾಗಿದೆ.
ಭಾರತದಲ್ಲಿ ಅಧಿಕ ಬಿಪಿ ಹೊಂದಿರುವ ಮಂದಿ ಶೇ 37ರಷ್ಟಿದ್ದು, ಇದರಲ್ಲಿ ಶೇ 32ರಷ್ಟು ಪುರುಷರು, ಶೇ 42 ಮಂದಿ ಮಹಿಳೆಯರಿದ್ದಾರೆ. ಶೇ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆ ಶೇ 35ರಷ್ಟಿದ್ದರೆ, ಪುರುಷರ ಸಂಖ್ಯೆ ಶೇ 25ರಷ್ಟಿದೆ.
ಪ್ರಸ್ತುತ ಅಧಿಕ ರಕ್ತದೊತ್ತಡ ಹೊಂದಿರುವ ಶೇ 15ರಷ್ಟು ಮಂದಿ ಮಾತ್ರ ನಿಯಂತ್ರಣ ಹೊಂದಿದ್ದಾರೆ. ನಿಯಂತ್ರಣ ಹೊಂದಿಲ್ಲದ ಅಧಿಕ ಬಿಪಿ ಹೊಂದಿರುವ ಮಂದಿಯಲ್ಲಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಅವಧಿ ಮುನ್ನ ಸಾವು ಸಂಭವಿಸಬಹುದು. ವರದಿಯಲ್ಲಿ ದೇಶದಲ್ಲಿನ ಶೇ 52ರಷ್ಟು ಮಂದಿ ಸಾವಿಗೆ ಹೃದಯ ರಕ್ತದೊತ್ತಡದಿಂದ ಹೃದಯಾಘಾತ ಸಮಸ್ಯೆ ಕಾರಣವಾಗಿದೆ ಎಂದು ವರದಿ ತೋರಿಸಿದೆ
ಜಾಗತಿಕ ಸಮಸ್ಯೆ: ಜಾಗತಿಕವಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಪ್ರಪಂಚಾದ್ಯಂತ ಕಾಡುತ್ತಿದೆ. ಐದರಲ್ಲಿ ನಾಲ್ಕು ಮಂದಿ ಈ ಸಮಸ್ಯೆ ಹೊಂದಿದ್ದು, ಅವರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆದರೆ, ದೇಶಗಳು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದರೆ, 2023ರ ರಿಂದ 20509ರೊಳಗೆ ಸಂಭವಿಸುವ 76 ಮಿಲಿಯನ್ ಸಾವು ತಡೆಯಬಹುದು ಎಂದು ವರದಿ ಹೇಳುತ್ತದೆ.