ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಆಯೋಜನೆ ಮಾಡಿರುವ ಪುಸ್ತಕ ಮೇಳಕ್ಕೆ ಪುಸ್ತಕಪ್ರಿಯರಿಂದ ಇಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಧಾನಸೌಧದ ಸಚಿವಾಲಯದ ವತಿಯಿಂದ ನಿನ್ನೆಯಿಂದ ಮಾ.3 ರವರೆಗೆ ಆಯೋಜನೆ ಮಾಡಿರುವ ಪುಸ್ತಕ ಜಾತ್ರೆಗೆ ಇಂದು ಸಾವಿರಾರು ಪುಸ್ತಕಪ್ರಿಯರು ಆಗಮಿಸಿ ಎಲ್ಲಾ ಮಳಿಗೆಗಳನ್ನು ವೀಕ್ಷಿಸಿ ತಮಗೆ ಬೇಕಾದ ಪುಸ್ತಕ ಖರೀದಿ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಸಾಹಿತ್ಯಾಸಕ್ತರು, ಪುಸ್ತಕಪ್ರಿಯರು, ವಿದ್ಯಾರ್ಥಿಗಳು, ವಯೋವೃದ್ಧರೂ ಸಹ ಪುಸ್ತಕ ಮೇಳಕ್ಕೆ ಆಗಮಿಸಿ ಪುಸ್ತಕ ಖರೀದಿಸಿದರು. ಇದರ ಜೊತೆಗೆ ವಿಧಾನಸೌಧದಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ನೌಕರರು, ಸಚಿವಾಲಯದ ಸಿಬ್ಬಂದಿ ಪುಸ್ತಕ ಮೇಳ ವೀಕ್ಷಿಸಿ ಹೊತ್ತಗೆಗಳನ್ನು ಖರೀದಿಸಿದರು.
ವಿಧಾನಸೌಧದ ಆವರಣದಲ್ಲಿ 151 ಪುಸ್ತಕ ಮಳಿಗೆಗಳನ್ನು ಹಾಕಲಾಗಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಹಾಗಾಗಿ, ಜನ ಜಾತ್ರೆಯಂತೆ ಮಳಿಗೆಗಳ ಬಳಿ ಸೇರಿದ ದೃಶ್ಯಗಳು ಕಂಡು ಬಂದವು. ಬಸವಣ್ಣ, ರಾಜ ಮಹಾರಾಜರ ಬಗೆಗಿನ ಕೃತಿಗಳು, ಹಿಂದಿನ ಸಾಹಿತಿಗಳು, ಬರಹಗಾರರು ಹಾಗೂ ಈಗಿನ ಸಾಹಿತಿ ಮತ್ತು ಬರಹಗಾರರವರೆಗೂ ಪುಸ್ತಕಗಳು ಮಾರಾಟದ ಮಳಿಗೆಯಲ್ಲಿವೆ. ಅದೇ ರೀತಿ ವಿದ್ಯಾರ್ಥಿಗಳ ಟೆಕ್ಸ್ಟ್ ಪುಸ್ತಕಗಳು, ಮಕ್ಕಳ ಕಲಿಕೆಯ ಪುಸ್ತಕಗಳು ಮಳಿಗೆಗಳಲ್ಲಿ ಕಂಡಬಂದವು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಪ್ರಸಕ್ತ ಸಾಲಿನ ಅನುದಾನದಲ್ಲಿ 2 ಲಕ್ಷ ರೂ. ಗಳ ಮಿತಿಯೊಳಗೆ ಶಾಸಕರು ಪುಸ್ತಕ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಶಾಸಕರು ಪುಸ್ತಕಗಳನ್ನು ಖರೀದಿಸಿ ಆಯಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
Laxmi News 24×7