ಬೆಳಗಾವಿ: ಅವರ ಪೂರ್ವಜರು ಸಂಸ್ಥಾನ ಆಳಿದ ದೊರೆಗಳು. ದರಬಾರಿನಲ್ಲಿ ಕಾರುಬಾರು ಮಾಡಿದವರು. ಆದರೆ, ಕಾಲಗಳು ಉರುಳಿದಂತೆ ವಂಶಜರು ಎಲ್ಲವನ್ನೂ ಕಳೆದುಕೊಂಡು ಸಾಮಾನ್ಯರಂತೆ ಬದುಕುತ್ತಿದ್ದಾರೆ. ಅವರು ಬೇರಾರೂ ಅಲ್ಲ, ವೀರರಾಣಿ ಬೆಳವಡಿ ಮಲ್ಲಮ್ಮಾಜಿಯ ವಂಶಜರು. ಸಮರ ಸಿಂಹಿಣಿ ವಂಶಜರ ಜೊತೆಗೆ ಈಟಿವಿ ಭಾರತ ನಡೆಸಿದ ಎಕ್ಸ್ಕ್ಲ್ಯೂಸಿವ್ ಮಾತುಕತೆ ಇಲ್ಲಿದೆ.
ಬೆಳವಡಿ ಸಂಸ್ಥಾನದ 31ನೇ ಅರಸ ವೀರ ಬೊಮ್ಮಪ್ಪನಾಯಿಕ ದೇಸಾಯಿ ಅವರು ಅಲ್ಲಿಯೇ ಸಮೀಪದ ಮುಳಕೂರ ಸಂಸ್ಥಾನದಲ್ಲಿ ಬಂದು ನೆಲೆಸಿದರು. ಆ ಬೊಮ್ಮಪ್ಪನಾಯಿಕ ಅವರ ಕರುಳ ಬಳ್ಳಿಗಳು ಇಂದಿನ ಬೈಲಹೊಂಗಲ ತಾಲ್ಲೂಕಿನ ನಯಾನಗರದ ಹಿರೇಮುಳಕೂರ ಗ್ರಾಮದಲ್ಲಿ ವಾಸವಾಗಿದ್ದಾರೆ.
ಮಲಪ್ರಭಾ ನದಿಯಲ್ಲಿ ಅವರ ಬಹಳಷ್ಟು ಜಮೀನು ಮುಳುಗಡೆಯಾಗಿವೆ. ಉಳಿದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಸಾಮಾನ್ಯ ಜನರಂತೆ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ವಾಡೆ, ಅರಮನೆ ಎಲ್ಲವನ್ನು ಮಲಪ್ರಭೆ ಆಹುತಿ ಪಡೆದಿದ್ದು, ಸಣ್ಣಸಣ್ಣ ಮನೆಗಳಲ್ಲಿ ವಾಸವಾಗಿದ್ದಾರೆ.
![]()
“ನಮ್ಮ ಮನೆಯಲ್ಲಿ ಇಂದು ಬಡತನ ಇರಬಹುದು. ಆದರೆ, ರಾಣಿ ಮಲ್ಲಮ್ಮನ ವಂಶಜರು ಎಂದೆನಿಸಿಕೊಳ್ಳಲು ನಮಗೆ ಹೆಮ್ಮೆ ಇದೆ. ಸರ್ಕಾರ ನಮ್ಮನ್ನು ಗುರುತಿಸಿ, ಈಗ ನಡೆಯುತ್ತಿರುವ ಬೆಳವಡಿ ಉತ್ಸವಕ್ಕೆ ಆಹ್ವಾನಿಸಬೇಕಿತ್ತು” ಎಂದು ಅವರು ಬೇಸರ ಹೊರಹಾಕಿದರು.
ಮಡಿವಾಳಪ್ಪ ದೇಸಾಯಿ ಅವರು ಮಾತನಾಡಿ, “ನಾವು ಬೆಳವಡಿ ಸಂಸ್ಥಾನದ ನಿಜವಾದ ವಂಶಜರು. ಮುಳಕೂರಿಗೆ ಬಂದು ನೆಲೆಸುವ ರಾಜಾ ಬೊಮ್ಮಪ್ಪ ದೇಸಾಯಿ ಅವರಿಂದ ನಮ್ಮ ಮನೆತನ ಮುಂದುವರಿದಿದೆ. ನಮಗೆ ಸಂಬಂಧಿಸಿದ ಜಾಗದಲ್ಲೇ ಮಲ್ಲಮ್ಮನವರ ಸಮಾಧಿ ಇದೆ. ಈಗ ಸದ್ಯಕ್ಕೆ ಅದು ಮುಳುಗಡೆಯಾಗಿದೆ. ನೀರು ಕಡಿಮೆಯಾದಾಗ ನಾವು ಪೂಜೆ ಮಾಡಿ ಬರುತ್ತೇವೆ. ಅಲ್ಲಿಯೇ ವೀರಭದ್ರೇಶ್ವರ ದೇವಸ್ಥಾನವೂ ಇದೆ. ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಮಲ್ಲಮ್ಮ, ಗಂಡು ಮಕ್ಕಳಿಗೆ ಮಲ್ಲಿಕಾರ್ಜುನ(ಮಲ್ಲಪ್ಪ) ಅಂತಾ ಹೆಸರಿಟ್ಟುಕೊಂಡು ಬಂದಿದ್ದೇವೆ” ಎಂದು ವಿವರಿಸಿದರು.
“ನಾವು ಬೆಳವಡಿ ಸಂಸ್ಥಾನದ ವಂಶಜರೆನ್ನಲು ಹೆಳವರ ಕಡೆ ವಂಶಾವಳಿ ಇದೆ. ಆಗಿನ ಕಾಲದ ತಲವಾರುಗಳಿವೆ. ಅದೇ ರೀತಿ ನಮ್ಮಲ್ಲಿದ್ದ ಬಹುತೇಕ ದಾಖಲೆಗಳು ಸವದತ್ತಿ ತಾಲ್ಲೂಕಿನ ಹೂಲಿ ಬ್ರಹ್ಮನ್ಮಠದಲ್ಲಿವೆ. ನಮ್ಮ ಬಹಳಷ್ಟು ಜಮೀನು ನೀರಲ್ಲಿ ಮುಳುಗಿದೆ. ಅಲ್ಪಸ್ವಲ್ಪ ಉಳಿದಿರುವ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ. ನಮ್ಮ ತಂದೆಯವರು ಇಬ್ಬರು ಅಣ್ಣ ತಮ್ಮಂದಿರು. ನಾವು ಮೂವರು ಸಹೋದರರು. ನಮ್ಮ ಚಿಕ್ಕಪ್ಪನ ಕುಟುಂಬ ದಾಂಡೇಲಿಯಲ್ಲಿ ನೆಲೆಸಿದೆ. ನೀವೇನು ಆಸ್ತಿ-ಪಾಸ್ತಿ ಕೊಡುವುದು ಬೇಡ. ನಮ್ಮಲ್ಲಿ ಹರಿಯುತ್ತಿರುವ ಮಲ್ಲಮ್ಮನ ರಕ್ತಕ್ಕೆ ಗೌರವ ಕೊಡಿ. ಸ್ವಾಭಿಮಾನದ ಬದುಕನ್ನು ಪ್ರೋತ್ಸಾಹಿಸುವಂತೆ” ಎಂದು ಮಡಿವಾಳಪ್ಪ ದೇಸಾಯಿ ಕೋರಿದರು.
Laxmi News 24×7