Breaking News

ವಿನಯ್‌ ಕುಲಕರ್ಣಿಗೆ ಜೀವಾವಧಿ |ತೀರ್ಪಿನಲ್ಲಿ ರಾಜಧರ್ಮದ ಪಾಠ – ಉಪನಿಷತ್ ಸಾರ ಉಲ್ಲೇಖ

Spread the love

ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ತಂಡದವರು ಭಾಗಿಯಾಗಿರುವ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್  ಅವರು ಉಪನಿಷತ್ ಉಲ್ಲೇಖಮಾಡಿ ಕಾನೂನನ್ನು ‘ಧರ್ಮʼಕ್ಕೆ ಹೋಲಿಸಿದ್ದಾರೆ.

ನ್ಯಾಯಾಧೀಶರು ನೀಡಿರುವ 623 ಪುಟಗಳ ಸುದೀರ್ಘ ಆದೇಶದಲ್ಲಿ ರಾಜಧರ್ಮ ಎಂದರೆ ಏನು ಎನ್ನುವುದನ್ನು ವಿವರಿಸಿದ್ದಾರೆ. ಕಾನೂನು ಧರ್ಮವಾಗಿಯೂ, ಧರ್ಮವನ್ನು ರಾಜನನ್ನಾಗಿಯೂ ಸಮಾಜ ಸ್ವೀಕರಿಸುತ್ತದೆ. ಒಬ್ಬ ರಾಜನಾದವನು ಅಶಕ್ತರನ್ನು ಬಲಾಢ್ಯರಿಂದ ರಕ್ಷಿಸಬೇಕು ಎಂಬ ಉಪನಿಷತ್ತಿನ ಸಾರವನ್ನು ಅವರು ಉಲ್ಲೇಖಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರ ರಾಜಧರ್ಮ ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿ, “ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ, ನಾಶ ಮಾಡುವವರನ್ನು ಧರ್ಮವೇ ನಾಶ ಮಾಡುತ್ತದೆ”. ಶಾಸಕನೊಬ್ಬ ಅಧಿಕಾರದಲ್ಲಿದ್ದಾಗ ಕೊಲೆ ಮಾಡಿರುವುದು ಅತ್ಯಂತ ಗಂಭೀರ ಅಪರಾಧ. ಸಮಾಜ ತನ್ನ ಪ್ರತಿನಿಧಿಯಿಂದ ಸುಧಾರಣೆಯಾಬೇಕು ಎಂದು ಬಯಸುತ್ತದೆ. ಜನರ ಕಲ್ಯಾಣ ಮತ್ತು ಕಾನೂನು ರೂಪಿಸುವ ಪರಮಾಧಿಕಾರ ಶಾಸಕಾಂಗಕ್ಕೆ ಇದೆ. ಶಾಸಕಾಂಗದ ಭಾಗವಾಗಿರುವ ಶಾಸಕರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಸಕರ ಜವಾಬ್ದಾರಿ ಮತ್ತು ಕ್ರೂರ ಕೃತ್ಯದ ಬಗ್ಗೆ ತಮ್ಮ ತೀರ್ಪಿನಲ್ಲಿ, ಶಾಸಕನೊಬ್ಬ ಅಧಿಕಾರದಲ್ಲಿದ್ದಾಗ ಕೊಲೆ ಪಿತೂರಿಯಲ್ಲಿ ಭಾಗಿಯಾಗಿರುವುದು ಅತ್ಯಂತ ಗಂಭೀರ ವಿಚಾರ. ಇದು ಆಕಸ್ಮಿಕ ಘಟನೆಯಲ್ಲ, ಬದಲಿಗೆ ಕಾನೂನು ಜಾರಿ ಸಂಸ್ಥೆಗಳ ಬೆಂಬಲದೊಂದಿಗೆ ನಡೆಸಲಾದ ಕ್ರೂರ ಕೃತ್ಯ. ವಿನಯ್ ಕುಲಕರ್ಣಿ ಅವರು ತಮ್ಮ ರಾಜಕೀಯ ಎದುರಾಳಿಯನ್ನು ಮಟ್ಟಹಾಕಲು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬರೆದಿದ್ದಾರೆ.

ಅಂದಿನ ತನಿಖಾಧಿಕಾರಿ ಚನ್ನಕೇಶವ ಟಿಂಗರಿಕರ್ ಅವರು ಆರೋಪಿಗಳೊಂದಿಗೆ ಕೈಜೋಡಿಸಿ ತನಿಖೆಯ ದಿಕ್ಕು ತಪ್ಪಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿಯೂ ಪೊಲೀಸರು ನ್ಯಾಯಾಲಯದ ಮುಂದೆ ಬಹಿರಂಗವಾಗಿ ಸುಳ್ಳು ಹೇಳಿದ್ದಾರೆ. ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ ಮತ್ತು ಶಂಕರಗೌಡ ಪಾಟೀಲ್ ವಿರುದ್ಧ ಸುಳ್ಳು ಸಾಕ್ಷ್ಯ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲು ಸೂಚಿಸಿದ ನ್ಯಾಯಾಧೀಶರು ರಾಜ್ಯದ ಪೊಲೀಸರೇ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕೊಲೆಯ ಹಿಂದೆ ನಡೆದ ವ್ಯವಸ್ಥಿತ ಹಣದ ವಹಿವಾಟು ಮತ್ತು ಸಭೆಗಳ ವಿವರಗಳನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಯೋಗೀಶ್ ಗೌಡರ ಕೊಲೆಗಾಗಿ ‘ಬೆಂಗಳೂರು ಬಾಯ್ಸ್’ ಎಂಬ ತಂಡಕ್ಕೆ 20 ಲಕ್ಷ ರೂಪಾಯಿ ನೀಡಲಾಗಿತ್ತು.ಕೊಲೆಗೂ ಮುನ್ನ ವಿನಯ್ ಕುಲಕರ್ಣಿ ಅವರ ಡೇರಿ ಫಾರ್ಮ್‌ನಲ್ಲಿ ಸಭೆ ನಡೆಸಲಾಗಿದ್ದು, ಅದರಲ್ಲಿ ಅಂದಿನ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ವಿವರಿಸಿದ್ದಾರೆ. ದಿಕ್ಕು ತಪ್ಪಿಸುವ ತಂತ್ರ: ಕೊಲೆ ಆರೋಪಿಗಳೆಂದು ಬಿಂಬಿಸಲು ಮತ್ತೊಂದು ಗುಂಪಿಗೆ 6 ಲಕ್ಷ ರೂಪಾಯಿ ನೀಡಲಾಗಿತ್ತು ಎಂದು ಹೇಳಿದ್ದಾರೆ. 

ಇಂತಹ ಕೃತ್ಯಗಳು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಟ್ಟಿರುವ ನಂಬಿಕೆಯನ್ನು ಕುಗ್ಗಿಸುತ್ತವೆ. ಧರ್ಮ ರಕ್ಷಕನೇ ಧರ್ಮ ಧ್ವಂಸಕನಾಗಬಾರದು. ಸಮಾಜ ತನ್ನ ಪ್ರತಿನಿಧಿಯಿಂದ ಸುಧಾರಣೆಯನ್ನು ಬಯಸುತ್ತದೆಯೇ ಹೊರತು ಇಂತಹ ಅಧರ್ಮವನ್ನಲ್ಲ ಎಂದು ನ್ಯಾಯಾಲಯ ಕಟುವಾಗಿ ನುಡಿದಿದೆ.

ಈ ಆದೇಶವು ಕೇವಲ ಒಂದು ಕೊಲೆ ಪ್ರಕರಣದ ತೀರ್ಪಲ್ಲ, ಬದಲಿಗೆ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಜನಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳಿಗೆ ನೀಡಿದ ಬಿಸಿ ಮುಟ್ಟಿಸುವಂತಹ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತದೆ.

ರಾಜಕೀಯ ಎದುರಾಳಿ ವಿರುದ್ಧ ದ್ವೇಷ ಸಾಧಿಸುವ ಭಯಾನಕ ಕೃತ್ಯ ಎಸಗಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಕೃತ್ಯವಲ್ಲ. ಬದಲಿಗೆ ಕಾನೂನು ಜಾರಿ ಸಂಸ್ಥೆಯ ಬೆಂಬಲದಿಂದ ಮಾಡಿರುವ ಕ್ರೂರ ಕೃತ್ಯವಾಗಿದೆ ಎಂದು ತೀರ್ಪಿನಲ್ಲಿ ವಿವರಿಸಿದ್ದಾರೆ.


Spread the love

About Laxminews 24x7

Check Also

ಕಲಘಟಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ – ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚಾರ ಸ್ಥಗಿತ, ಮಾರ್ಗ ಬದಲಾವಣೆ

Spread the love ಕಾರವಾರ: ಹುಬ್ಬಳ್ಳಿ – ಕಾರವಾರ ರಾಷ್ಟ್ರೀಯ ಹೆದ್ದಾರಿ 63ರ ದೇವಿಕೊಪ್ಪ ಗ್ರಾಮದ ಐ.ಬಿ ಕ್ರಾಸ್ ಬಳಿ ಎಲ್‌ಪಿಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ