ತಿರುವನಂತಪುರಂ : ದೇಶದಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಕೊರೋನಾ ತಗ್ಗಿಸುತ್ತಿರುವ ಕೇರಳ ರಾಜ್ಯವು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳತ್ತಿದೆ.
ಕೇರಳದ ವಯನಾಡಿನಲ್ಲಿ ಜಿಲ್ಲೆಯಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕದೇ ಸಿಕ್ಕಿಬಿದ್ದರೆ 5000 ರೂ ದಂಡ ವಿಧಿಸಲಾಗುವುದು ಎಂದು ವಯನಾಡಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್ ಇಲಾಂಗೊ ಪ್ರಕಟಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಯನ್ನು ಕೇರಳ ಪೊಲೀಸ್ ಆಕ್ಟ್(ಕೆಪಿಎ) 118ಇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಜತೆಗೆ, ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗೆ ಬರೋಬ್ಬರಿ ವಿಧಿಯಲ್ಲದೆ 5,000 ದಂಡ ಪಾವತಿಸಬೇಕಾಗುತ್ತದೆ,” ಎಂದು ವಯಾನಾಡ್ ಎಸ್‌ಪಿ ತಿಳಿಸಿದ್ದಾರೆ.
“ಮಾಸ್ಕ್ ಧರಿಸದ ವ್ಯಕ್ತಿ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲು ಇಚ್ಚಿಸಬಹುದು. ಒಂದು ವೇಳೆ ನ್ಯಾಯಾಲಯದಲ್ಲಿ ಆ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾದರೆ, 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು ಅಥವಾ 10,000 ದಂಡ ಅಥವಾ ಎರಡೂ ಶಿಕ್ಷೆ ನೀಡಬಹುದಾಗಿದೆ,” ಎಂದು ಎಲಾಂಗೊ ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ ಮತ್ತೊಂದು ಮಾರ್ಗಸೂಚಿಯೊಂದನ್ನು ನೀಡಿದ್ದು, ಯಾವುದೇ ಅಂಗಡಿಯಲ್ಲಿ ಸ್ಯಾನಿಟೈಸರ್ ಅಥವಾ ಸೋಪ್ ಇಲ್ಲದಿದ್ದರೆ 1000 ರೂ ದಂಡ ವಿಧಿಸಲಾಗುತ್ತದೆ.
“ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸುವುದಲ್ಲದೆ, ಅಂಗಡಿಗಳಲ್ಲಿ ಕೆಲಸ ಮಾಡುವವರು ಗಿರಾಕಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ಅವರು ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಹಾಗೂ ಅಂಗಡಿಯಲ್ಲಿ ಕಾರ್ಯನಿರ್ವಹಿಸುವವರು ಫೇಸ್ ಮಾಸ್ಕ್ ಧರಿಸದಿದ್ದಲ್ಲಿ ಅಂತಹ ಅಂಗಡಿಗೆ 1,000 ರೂ ದಂಡ ವಿಧಿಸಲಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.
ವಯನಾಡ್ ಜಿಲ್ಲೆಯು ಪ್ರಸ್ತುತ ಗ್ರೀನ್ ಝೋನ್ ಆಗಿದ್ದು, ಯಾವುದೇ ಕೊರೋನಾ ವೈರಸ್ ಸಕಾರಾತ್ಮಕ ಪ್ರಕರಣಗಳಿಲ್ಲ ಆದರೆ ಮನೆಗಳಲ್ಲಿ 842 ಜನರು ಮತ್ತು ಆಸ್ಪತ್ರೆಗಳಲ್ಲಿ ಒಂಬತ್ತು ಜನರ ಮೇಲೆ ನಿಗಾ ಇಡಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಮಾಹಿತಿ ಪ್ರಕಾರ ಕೇರಳದಲ್ಲಿ ಇಲ್ಲಿಯವರೆಗೂ 485 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 359 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮಾರಣಾಂತಿಕ ಸೋಂಕಿಗೆ 4 ಮಂದಿ ಮೃತಪಟ್ಟಿದ್ದಾರೆ.