ಶ್ರೀನಗರ, ಜೂ.17- ಇಂಡೋ-ಚೀನಾ ಗಡಿಯಲ್ಲಿ ಉಭಯ ಸೇನಾ ಪಡೆಗಳ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿರುವಾಗಲೇ ಅತ್ತ ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲೂ ಪಾಕಿಸ್ತಾನ ಸೇನಾಪಡೆಗಳ ಪುಂಡಾಟ ಮುಂದುವರಿದಿದೆ.
ಜಮ್ಮು ಮತ್ತು ಕಾಶ್ಮೀರದ ನೌಗಂ ಬಳಿ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನಾ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ನಿನ್ನೆ ರಾತ್ರಿ ಪಾಕಿಸ್ತಾನ ಸೈನಿಕರು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿ, ಶೆಲ್‍ಗಳನ್ನು ಉಡಾಯಿಸಿದೆ. ಪಾಕಿಸ್ತಾನ ಸೇನಾ ಪಡೆಯ ದಾಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದು, ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು. ಸಾವು-ನೋವಿನ ವರದಿಯಾಗಿಲ್ಲ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯ ಗಡಿ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಪಾಕಿಸ್ತಾನ ರೇಂಜರ್‍ಗಳು ಯುದ್ಧ ವಿಮಾನಗಳನ್ನು ಉಲ್ಲಂಘಿಸಿ ಅಪ್ರೇರಿತ ದಾಳಿಗಳನ್ನು ನಡೆಸುತ್ತಿದ್ದು, ಭಾರತೀಯ ಯೋಧರೂ ಸೂಕ್ತ ತಿರುಗೇಟು ನೀಡುತ್ತಿದ್ದಾರೆ.