ಮೈಸೂರು: ಬುಧವಾರ (ಆ.30) ನಗರದಲ್ಲಿ ನಡೆಯಲಿರುವ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧವಾಗಿದೆ.
ಹಲವಾರು ರೀತಿಯ ವೈಶಿಷ್ಟ್ಯತೆಗಳಿಂದ ಕೂಡಿರುವ ಈ ಬೃಹತ್ ವೇದಿಕೆಯ ಸಿದ್ಧತೆಯ ಕಾರ್ಯ ಮಹಾರಾಜ ಕಾಲೇಜು ಮೈದಾನದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲ್ವಿಚಾರಣೆಯಲ್ಲಿ ನಡೆದಿದೆ. ಡಿಸಿಎಂ ನಿನ್ನೆ ಸಂಜೆ ಮೈದಾನದಲ್ಲಿ ಸಿದ್ಧವಾಗುತ್ತಿರುವ ವೇದಿಕೆ ನಿರ್ಮಾಣ ಕಾರ್ಯವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದರು.
ವೇದಿಕೆಯ ವಿಶೇಷತೆಗಳೇನು: ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಇನ್ನೂ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಮಹಾರಾಜ ಕಾಲೇಜಿನ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು. ಇದು ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದೆ, ಸುಮಾರು 80ಅಡಿ ಉದ್ದ, 60ಅಡಿ ಅಗಲ, 8ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದೆ. ವೇದಿಕೆ ಹಿಂಭಾಗ 140 ಅಡಿಯ ಬೃಹತ್ ಎಲ್‌ಇಡಿ ಪರದೆಯನ್ನು ಇರಿಸಲಾಗಿದೆ. ವಿಐಪಿ, ವಿವಿಐಪಿ ಗಳಿಗೆ ವಿಶ್ರಾಂತಿ ಕೊಠಡಿಗಳು ಸಹ ಸಿದ್ಧವಾಗಿವೆ. ಜೊತೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ವಾಟರ್ ಪ್ರೂಫ್ ಜರ್ಮನ್ ಟೆಂಟ್ ನಿರ್ಮಾಣವಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ ವ್ಯವಸ್ಥೆಯನ್ನು ಸಹ ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ ಮುಂಭಾಗ ಸುಮಾರು 1ಲಕ್ಷ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 11:30ಕ್ಕೆ ಕಾರ್ಯಕ್ರಮ ಪ್ರಾರಂಭ: ಇನ್ನು ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಡಾ. ಹೆಚ್ ಸಿ ಮಹದೇವಪ್ಪ ಸೇರಿದಂತೆ ರಾಜ್ಯದ ಮಂತ್ರಿಗಳು, ಮೈಸೂರು ಭಾಗದ ನಾಲ್ಕು ಜಿಲ್ಲೆಗಳ ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಬುಧವಾರ ಬೆಳಗ್ಗೆ 11:30 ಕ್ಕೆ ಆರಂಭವಾಗಲಿದೆ. ರಾಜ್ಯಾದ್ಯಂತ ಸುಮಾರು 12,600 ಕಡೆ ನೇರ ಪ್ರಸಾರ ಆಗಲಿದೆ. ಇಂದು ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಪರಿಶೀಲನೆ ಮಾಡಿದರು.