ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅವರಾದಿ ಗ್ರಾಮದ ರೈತ ಲಕ್ಷ್ಮಣ ದಳವಾಯಿ ಅವರು ಟಗರು ಸಾಕಾಣಿಕೆಯಿಂದ ಯಶಸ್ಸು ಕಾಣುತ್ತಿದ್ದಾರೆ.
ಮೂರು ಎಕರೆ ಜಮೀನು ಹೊಂದಿರುವ ಅವರು ಬಹಳಷ್ಟು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದರು. ಕಬ್ಬಿಗೆ ಸರಿಯಾದ ದರ ದೊರೆಯದೆ ಕಷ್ಟಪಟ್ಟಿದ್ದರು. ಹೀಗಾಗಿ, ಕೃಷಿಯೊಂದಿಗೆ ಟಗರು ಸಾಕಾಣಿಕೆ ಕನಸು ಕಂಡು 8 ವರ್ಷಗಳ ಹಿಂದೆ ಕೇವಲ 3 ಟಗರು ತಂದು ಸಾಕಲು ಶುರು ಮಾಡಿದರು. ಕ್ರಮೇಣ ಹೆಚ್ಚಿಸುತ್ತಾ ಸದ್ಯ ಅಂದಾಜು 60ರಿಂದ 80 ಟಗರುಗಳನ್ನು ಸಾಕುತ್ತಿದ್ದಾರೆ.
ಮೂರು ತಿಂಗಳಿನ ಮರಿಗಳನ್ನು ಅಮೀನಗಡ, ಮುಧೋಳ, ಕೆರೂರ ಸಂತೆಯಲ್ಲಿ ₹5ಸಾವಿರದಿಂದ ₹6ಸಾವಿರದಂತೆ ಖರೀದಿಸಿ 10 ತಿಂಗಳವರೆಗೆ ಸಾಕಿ ಬಳಿಕ ಮಾರುತ್ತಾರೆ. ಸುಸಜ್ಜಿತವಾದ ಎರಡು ಶೆಡ್‌ಗಳನ್ನು ನಿರ್ಮಿಸಿದ್ದಾರೆ. 25 ಅಡಿ ಮತ್ತು 30 ಅಡಿ ಉದ್ದಳತೆಯಲ್ಲಿ ಗಾಳಿ, ಬೆಳಕು ಲಭ್ಯವಾಗುವಂತೆ ವ್ಯವಸ್ಥೆ ಮಾಡಿದ್ದಾರೆ.
ಟಗರುಗಳು ಆಹಾರ ತಿನ್ನಲು ಹಾಗೂ ರಾತ್ರಿ ವೇಳೆ ವಿಶ್ರಾಂತಿಗಾಗಿ ಬಿದಿರು ಮತ್ತು ಹುಲ್ಲಿನ ಚಾಪೆಗಳನ್ನು ಬಳಸಿ 50 ಅಡಿ ಮತ್ತು 30 ಅಡಿ ಉದ್ದಳತೆಯ ದೇಶಿ ಶೆಡ್ ನಿರ್ಮಿಸಿದ್ದಾರೆ. ಗೋವಿನಜೋಳ, ರೇಷ್ಮೆ ಎಲೆ, ಹುಲ್ಲು, ಸಜ್ಜಿ ಮೇವನ್ನು ಸಣ್ಣಗೆ ಕತ್ತರಿಸಿ ನಿಯಮಿತವಾಗಿ ನೀಡುತ್ತಾರೆ.
ಶೆಡ್‌ನಲ್ಲಿ ಸ್ಪೀಕರ್ ಅಳವಡಿಸಿದ್ದು, ಟಗರುಗಳು ಇಂಪಾದ ಸಂಗೀತ ಕೇಳುತ್ತಾ ಮೆಲ್ಲುವ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ. ಹುಲ್ಲು ಕತ್ತರಿಸಲು ಆಧುನಿಕ ಯಂತ್ರ ಬಳಸುತ್ತಿದ್ದಾರೆ. ಟಗರುಗಳ ಗಂಜಲ ಮತ್ತು ಕೊಟ್ಟಿಗೆ ತೊಳೆದ ನೀರನ್ನು ತೋಟಕ್ಕೆ ಸಾವವಯ ಗೊಬ್ಬರವಾಗಿ ಬಳಸುತ್ತಿದ್ದಾರೆ.
‘₹6ಸಾವಿರಕ್ಕೊಂದರಂಗ 3 ತಿಂಗಳಿನ ಮರಿಗಳನ್ನು ತಂದು 10 ತಿಂಗಳು ಮೇಯಿಸಿದರೆ ಒಂದೊಂದು ಟಗರು ₹22ಸಾವಿರದಿಂದ ₹25ಸಾವಿರಕ್ಕೆ ಮಾರಾಟ ಆಗತ್ತಾವರ್ರೀ’ ಎನ್ನುತ್ತಾರೆ ಅವರು.
‘ಮರಿಗಳ ಖರೀದಿ, ಅವುಗಳಿಗೆ ಆಹಾರ, ಆರೈಕೆ ಹೀಗೆ ಎಲ್ಲ ಖರ್ಚು ತೆಗೆದು ವರ್ಷದಲ್ಲಿ ₹7ಲಕ್ಷದಿಂದ ₹8 ಲಕ್ಷದವರೆಗೆ ವರಮಾನ ಸಿಗತೈತ್ರೀ…’ ಎಂದು ಟಗರು ಸಾಕಾಣಿಕೆಯ ಅನುಭವ ಹಂಚಿಕೊಂಡರು.
‘ಟಗರುಗಳ ಖರೀದಿಗಾಗಿ ಬೆಂಗಳೂರಿನ ಕೆಲವು ಕಂಪನಿಗಳ ಏಜಂಟರು ತೋಟಕ್ಕೆ ಬರುತ್ತಾರೆ. ಇದರಿಂದಾಗಿ, ಮಾರಾಟ ಮಾಡೋದು ತ್ರಾಸ್ ಇಲ್ಲರ್ರೀ. ಪ್ರತಿ ಶುಕ್ರವಾರ ಮುಧೋಳದಲ್ಲಿ ಕುರಿ, ಟಗರು ವಹಿವಾಟಿನ ಸಂತೆ ಕೂಡೋದರಿಂದ ಅಲ್ಲಿ ಒಯ್ದರೆ ಟಗರು ಖರೀದಿಸಿ ಕೈಯಾಗ ಹಣ ಕೊಡತ್ತಾರ್ರೀ. ಹಿಂಗಾಗಿ ಟಗರು ಸಾಕೋದು ಅಂದರ ಬ್ಯಾಂಕ್ ಇದ್ದಾಂಗರ್ರೀ’ ಎನ್ನುತ್ತಾರೆ ಲಕ್ಷ್ಮಣ.
‘ನಿತ್ಯ ಎರಡು ಬಾರಿ ಶೆಡ್‌ಗಳನ್ನು ಸ್ವಚ್ಛ ಮಾಡುವುದರಿಂದ ರೋಗಗಳು ಬರೋದಿಲ್ಲರ್ರೀ. ಪತ್ನಿ ಮಾಯವ್ವ ಶೆಡ್‌ಗಳ ಸ್ವಚ್ಛತೆ ಮೊದಲಾದ ಕೆಲಸಗಳಲ್ಲಿ ಸಹಕರಿಸುತ್ತಾರೆ. ಟಗರಗುಳ ಸಾಕಣೆಯಿಂದ ಬದುಕು ಬಾಳ ಚಲೋ ಆಗೈತ್ರೀ’ ಎಂದು ತಿಳಿಸಿದರು. ಸಂಪರ್ಕಕ್ಕಾಗಿ ಮೊ. 9901130351.