ಬೆಂಗಳೂರು: ರೌಡಿ ಶಿವಪ್ರಕಾಶ್ ಆಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಸಿಐಡಿ ಪೊಲೀಸರಿಂದ ಬಂಧಿತನಾಗಿ ವಿಚಾರಣೆ ಎದುರಿಸುತ್ತಿರುವ ಆರೋಪಿ ಜಗದೀಶ್ ವಿರುದ್ಧ ಭಾರತೀನಗರ ಪೊಲೀಸರು ಮತ್ತೆ ರೌಡಿಶೀಟ್ ತೆರೆದಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲ ಆರೋಪಿಗಳ ಮೇಲೆಯೂ ರೌಡಿಪಟ್ಟಿ ತೆರೆದಿರುವ ಪೊಲೀಸರು ಇದೀಗ ಜಗದೀಶ್ ವಿರುದ್ಧ ರೌಡಿಶೀಟ್ ತೆರೆದಿದ್ದಾರೆ. ರಾಜಕೀಯ ಪ್ರಭಾವ ಬಳಸಿ 2023ರಲ್ಲಿ ರೌಡಿಪಟ್ಟಿಯಿಂದ ಜಗದೀಶ್ ಹೆಸರು ಕೈ ಬಿಡಲಾಗಿತ್ತು.
ಕೊಲೆ, ಕೊಲೆ ಯತ್ನ, ದರೋಡೆ, ವಂಚನೆ, ಜೀವ ಬೆದರಿಕೆ, ಅಪಹರಣ ಹಾಗೂ ಜಾತಿನಿಂದನೆ ಸೇರಿ 10ಕ್ಕಿಂತ ಹೆಚ್ಚು ಪ್ರಕರಣಗಳು ಜಗದೀಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು. 2000ರಲ್ಲಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಜಗದೀಶ್ ವಿರುದ್ಧ ರೌಡಿಶೀಟ್ ಓಪನ್ ಆಗಿತ್ತು.
ಕ್ರಮೇಣ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಗೆ ನಿವಾಸ ಬದಲಿಸಿದ್ದ. ಈತನ ವಿರುದ್ಧ ಇಂದಿರಾ ನಗರ, ಜೆಪಿ ನಗರ, ಜೆ.ಬಿ.ನಗರ, ಕಮರ್ಷಿಯಲ್ ಸ್ಟ್ರೀಟ್, ಕಬ್ಬನ್ ಪಾರ್ಕ್, ಅಶೋಕ ನಗರ, ಕೆ.ಆರ್ ಪುರ, ರಾಮಮೂರ್ತಿ ನಗರ, ಹೆಣ್ಣೂರು, ಭಾರತಿನಗರ ಪೊಲೀಸ್ ಠಾಣೆಗಳಲ್ಲಿ 10ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದವು. ಆದಾಗ್ಯೂ ರೌಡಿಪಟ್ಟಿಯಿಂದ ತಮ್ಮ ಹೆಸರು ತೆಗೆಸುವಲ್ಲಿ ಜಗದೀಶ್ ಸಫಲನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7