ತುಮಕೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಹೊರವಲಯದ ಅಂತರಸನಹಳ್ಳಿ ಬಳಿ ನಡೆದಿದೆ. ಮಂಡ್ಯ ಜಿಲ್ಲೆಯ ಗಣನೂರು ಗ್ರಾಮದ ಗೀತಾ (20) ಕೊಲೆಯಾದ ಪತ್ನಿಯಾಗಿದ್ದಾರೆ.
ಪತಿ ನವೀನ್ ಕೊಲೆ ಮಾಡಿರುವ ಆರೋಪಿ. ಮಹಿಳೆಯ ಕುತ್ತಿಗೆ, ಮುಖ ಹಾಗೂ ಇತರ ಭಾಗಗಳಿಗೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನವೀನ್ ತುಮಕೂರು ತಾಲೂಕಿನ ಅಮೃತಗಿರಿಯ ವಾಸಿಯಾಗಿದ್ದು, ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರೂ ವಾಸವಿದ್ದರು. ನವೀನ್ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡ್ತಿದ್ದ.
ಇಬ್ಬರೂ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಬಳಿಕ ಪರಸ್ಪರ ಇಷ್ಟಪಟ್ಟು ಮದುವೆ ಆಗಿದ್ದರು. ಆದರೆ, ದಂಪತಿಯ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಶನಿವಾರ ರಾತ್ರಿ ಗಲಾಟೆ ತಾರಕಕ್ಕೇರಿ ಮನೆಯಲ್ಲೇ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಂದ ಪತಿ ( ಚಾಮರಾಜನಗರ): ಗರ್ಭಿಣಿಯೊಬ್ಬರನ್ನು ಪತಿಯೇ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ಶನಿವಾರ ನಡೆದಿತ್ತು. ಶುಭಾ(38) ಎಂಬವರೇ ಕೊಲೆಯಾದವರು, ಮಹೇಶ್ ಹತ್ಯೆ ಮಾಡಿರುವ ಆರೋಪಿ. ಮೃತ ಮಹಿಳೆಯು ತನ್ನ ಗಂಡ ಹಾಗೂ ಅತ್ತೆ ಭಾರತಿ ಜೊತೆ ತೋಟದ ಮನೆಯಲ್ಲಿ ವಾಸವಿದ್ದರು.
ಕೊಲೆ ನಡೆದಿರುವುದು ಏಕೆ?: ಮಹೇಶ್ಗೆ ಹಣಕಾಸಿನ ಅಡಚಣೆ ಇತ್ತು. ಹೀಗಾಗಿ, ಪತ್ನಿ ಶುಭಾಗೆ ತವರು ಮನೆಯಿಂದ ಹಣ ತರುವಂತೆ ಪದೇ ಪದೇ ತೊಂದರೆ ಕೊಡುತ್ತಿದ್ದ. ಶುಭಾ ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದರು. ಶುಭಾ ಮಗು ಇರಲಿ ಎಂದಿದ್ದರೆ, ಮಹೇಶ್ ಮಗು ಬೇಡ ಎಂದು ಗಲಾಟೆ ತೆಗೆದಿದ್ದ. ಅಲ್ಲದೇ, ಗರ್ಭಿಣಿಯಾಗಿರುವುದನ್ನು ಇಷ್ಟು ತಡವಾಗಿ ಯಾಕೆ ಹೇಳುತ್ತಿದ್ದಿಯಾ ಎಂದು ಜಗಳ ಮಾಡಿದ್ದ. ಅಲ್ಲದೆ, ಪತ್ನಿ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ಇದ್ದುದರಿಂದಾಗಿ ಈ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ಚಾಮರಾಜನಗರ ಎಸ್ಪಿ ಡಾ. ಬಿ.ಟಿ. ಕವಿತಾ ವಿವರಿಸಿದ್ದಾರೆ.