ಚಾಮರಾಜನಗರ: ಹೂಗ್ಯಂ ವಲಯದಲ್ಲಿ 5 ಹುಲಿಗಳ ಅಸಹಜ ಸಾವು ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಮಾತನಾಡಿದ ಅವರು, ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಕಾನೂನು ರೀತ್ಯಾ ಕ್ರಮ ಆಗುತ್ತಿದೆ. ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.
ಕಾಡುಗೋಡಿ ಪ್ಲಾಂಟೇಷನ್ನ 120 ಎಕರೆ ಅರಣ್ಯ ಭೂಮಿ ಮರುವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇಂದು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಗ್ಗೆ ಪ್ರತಿಕ್ರಿಯಸುತ್ತಾ, ಅರಣ್ಯಭೂಮಿಯನ್ನು ಹಂಚಿಕೆ, ಮಂಜೂರು ಮಾಡಲು ಬರುವುದಿಲ್ಲ. ಅರಣ್ಯೇತರ ಉದ್ದೇಶಕ್ಕೆ ಅರಣ್ಯಭೂಮಿ ಬಳಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಅನುಮತಿ ಕಡ್ಡಾಯ. ಉದ್ಯಾನನಗರಿ, ನಿವೃತ್ತರ ಸ್ವರ್ಗ ಬೆಂಗಳೂರು ನಗರ ಕಾಂಕ್ರೀಟ್ ಕಾಡಾಗುತ್ತಿದ್ದು, ಹಸಿರು ಹೊದಿಕೆ ಸಂವರ್ಧನೆಗಾಗಿ ಕಾಡುಗೋಡಿ ಅರಣ್ಯ ಭೂಮಿ ಸಂರಕ್ಷಿಸಲು ಕ್ರಮ ವಹಿಸಲಾಗಿದೆ ಎಂದರು.
ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂ. 1ರಲ್ಲಿ 711 ಎಕರೆಯನ್ನು ನೆಡುತೋಪಿಗಾಗಿ 1896 ರಲ್ಲಿ ನೀಡಲಾಗಿರುತ್ತದೆ. ಬಳಿಕ 1901ರಲ್ಲಿ ಅರಣ್ಯ ನಿಯಮಗಳು 1900ರ ರೀತ್ಯಾ ರಾಜ್ಯ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿರುತ್ತದೆ. ಅಧಿಸೂಚಿತ ಅರಣ್ಯ ಮೀಸಲು ಅರಣ್ಯವಾಗಿರುತ್ತದೆ ಎಂದರು.
Laxmi News 24×7