ಕಾರವಾರ(ಉತ್ತರ ಕನ್ನಡ): ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಆರ್‌ಟಿಸಿ (ಕಂದಾಯ ದಾಖಲೆಗಳು) ಬಳಸಿ ನ್ಯಾಯಾಲಯಕ್ಕೆ ವಂಚನೆ ಮಾಡಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ದೊಡ್ಡ ಜಾಲವೊಂದನ್ನು ಕಾರವಾರದ ನ್ಯಾಯಾಧೀಶರು ಪತ್ತೆ ಹಚ್ಚಿದ್ದಾರೆ. ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರ ಸಮಯೋಚಿತ ಕಾರ್ಯದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಕಡಬದ ಮಹಿಳೆ ಪಿ.ಸಿ.ಅಲೈಸ್ ಕುರಿಯನ್ ಚಾಕು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆ ನಕಲಿ ಆಧಾರ್ ಮತ್ತು ಆರ್‌ಟಿಸಿ ದಾಖಲೆಗಳನ್ನು ಬಳಸಿ ಎಂಟು ಕಡೆಗಳಲ್ಲಿ ಜಾಮೀನು ನೀಡಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಮಹಿಳೆ ಜೊತೆ ಇಬ್ಬರು ವ್ಯಕ್ತಿಗಳು ಕೂಡ ನಕಲಿ ದಾಖಲೆಗಳನ್ನು ನೀಡುವಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಘಟನೆ ನಡೆದದ್ದು ಹೀಗೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಶಿರಸಿಯ ವ್ಯಕ್ತಿಯೊಬ್ಬರಿಗೆ ಜಾಮೀನು ಕೊಡಿಸಲು ಕಡಬದ ಮಹಿಳೆ ಅಲೈಸ್ ಕುರಿಯನ್ ಚಾಕು ನ್ಯಾಯಾಲಯಕ್ಕೆ ಬಂದಿದ್ದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರಿಗೆ ಅನುಮಾನ ಬಂದಿದೆ. ತಕ್ಷಣವೇ ತನಿಖೆ ನಡೆಸಿದಾಗ ಈ ಬೃಹತ್ ನಕಲಿ ದಾಖಲೆ ಜಾಲದ ಕುರಿತು ಸತ್ಯಾಂಶ ಬಯಲಾಗಿದೆ.ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ರವೀಂದ್ರ ಆರ್.ನಾಯ್ಕ ಅವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ನಕಲಿ ದಾಖಲೆಗಳನ್ನು ನೀಡಿದ ಮಹಿಳೆಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೆ, ಈ ನಕಲಿ ದಾಖಲೆ ಜಾಲವನ್ನು ಸಂಪೂರ್ಣವಾಗಿ ಭೇದಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಅಲೈಸ್ ಕುರಿಯನ್ ಚಾಕು ಅವರೊಂದಿಗೆ ಬಂದಿದ್ದ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
Laxmi News 24×7