ಕೊಪ್ಪಳ : ಹರಿಯುವ ನೀರನ್ನು ನಿಲ್ಲಿಸಬೇಕು. ನಿಲ್ಲಿಸಿದ ನೀರನ್ನು ಇಂಗಿಸಬೇಕು, ಇದು ಪ್ರಕೃತಿಯ ಜಲನಿಯಮ. ಆದರೆ ಇತ್ತೀಚಿಗೆ ಕೆರೆ ಕಟ್ಟೆಗಳಲ್ಲಿ ನೀರು ನಿಲ್ಲುವುದೇ ಕಡಿಮೆ. ಈ ಮಧ್ಯೆ ಮಳೆ ಕಡಿಮೆಯಾಗಿ ಬತ್ತಿದ್ದ ಕೆರೆಗೆ ಏತ ನೀರಾವರಿ ಯೋಜನೆಯಿಂದ ಜೀವ ಕಳೆ ಬಂದಿದೆ. ಇದರಿಂದ ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಹೊಸಹಳ್ಳಿ ಕೆರೆ 2012ರಲ್ಲಿ ಮಾತ್ರ ತುಂಬಿ ಹರಿದಿತ್ತು. ಅಲ್ಲಿಂದ 2025ರ ವರೆಗೂ ಕೆರೆ ತುಂಬಿ ಕೋಡಿ ಬೀಳುವಷ್ಟು ನೀರು ಒಮ್ಮೆಯೂ ಬಾರದೆ ನೀರಿಲ್ಲದೆ ಕೆರೆ ಬತ್ತಿ ಹೋಗಿತ್ತು. ಈ ಮಧ್ಯೆ 2013-14 ನೇ ಸಾಲಿನಲ್ಲಿ ಆರಂಭವಾಗಿದ್ದ ಬಹದ್ದೂರು, ನವಲಕಲ್ ಏತ ನೀರಾವರಿ ಯೋಜನೆಯು ಈಗ ಒಂದು ಹಂತದಲ್ಲಿ ಪೂರ್ಣಗೊಂಡಿದೆ. ಈ ಯೋಜನೆಯಿಂದ ಕೆರೆಗಳಿಗೆ ನೀರನ್ನ ತುಂಬಿಸಲಾಗುತ್ತಿದೆ.
ನೀರು ತುಂಬಿಸಿದ್ದರಿಂದ ಕೆರೆ ಭರ್ತಿಯಾಗಿದೆ: ಈ ಬಗ್ಗೆ ಬಹದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗಾನಂದ ಅವರು ಮಾತನಾಡಿ, ”ಸುಮಾರು 11 ವರ್ಷದಿಂದ ಹೊಸಹಳ್ಳಿ ಕೆರೆ ತುಂಬಿರಲಿಲ್ಲ. ಶಾಸಕರ ಪ್ರಯತ್ನದಿಂದ ಹೊಸಹಳ್ಳಿ ಕೆರೆಗೆ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ನೀರು ತುಂಬಿಸಿದ್ದರಿಂದ ಕೆರೆ ಭರ್ತಿಯಾಗಿದೆ. ಇದರಿಂದ ಜನರಿಗೆ ಖುಷಿಯಾಗಿದೆ. ಸುತ್ತಮುತ್ತಲ ಜಮೀನುಗಳಲ್ಲಿರುವ ಬೋರ್ವೆಲ್ಗಳ ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಇದರಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು ಸಿಕ್ಕಿದೆ. ಉಳಿದ ಎಲ್ಲಾ ಗ್ರಾಮಗಳಲ್ಲಿ ಕೆರೆಯನ್ನ ತುಂಬಿಸಬೇಕು” ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಅವರು ಹೇಳಿದ್ದೇನು?: ”ಇದೇ ಏತನೀರಾವರಿ ಯೋಜನೆಯಿಂದ ಗಿಣಗೇರಿ, ಬಸಾಪುರ ಸೇರಿ ಐದು ಕೆರೆಗಳಿಗೆ ನೀರು ತುಂಬಿಸಲಾಗುವುದು. ಬಾಕಿ ಇರುವ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ನಮ್ಮಲ್ಲಿ ಇದು 16,000 ಎಕರೆ ನೀರಾವರಿ ಯೋಜನೆಯಾಗಿದೆ. ಬಹುಶಃ ಇದು 20,000 ಎಕರೆವರೆಗೂ ವಿಸ್ತರಿಸಲಾಗುತ್ತದೆ. ಯೋಜನೆಗೆ ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಅವರು ಸಭೆ ಕರೆದು 256 ಕೋಟಿ ರೂ. ಅನುದಾನ ಮೊತ್ತವನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನೂ ಪ್ರಾರಂಭಿಸುತ್ತೇವೆ” ಎಂದು ಹೇಳಿದ್ದಾರೆ.
ಬೇಸಿಗೆಯ ಕಾಲದಲ್ಲಿ ಈ ಬಾಗದಲ್ಲಿ ನೀರಿನ ಸಮಸ್ಯೆ ಅಧಿಕವಾಗಿರುತ್ತದೆ. ಈ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಿ ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಜನರು ಹೇಳುತ್ತಿದ್ದಾರೆ.
Laxmi News 24×7