ಬೆಂಗಳೂರು: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಬೆಂಬಲಿಗರ ಜೊತೆ ಬೆಂಗಳೂರಲ್ಲಿ ಸಭೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಹೈದರಾಬಾದ್ನಿಂದ ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ನೇರವಾಗಿ ಕಾರಿನಲ್ಲಿ ಬೆಂಗಳೂರಿನ ಯು.ಬಿ.ಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸಕ್ಕೆ ತೆರಳಿದರು.
ಈ ಮೊದಲು ಸದಾಶಿವನಗರದಲ್ಲಿರುವ ಮಾಜಿ ಶಾಸಕ ಕುಮಾರ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದ ಯತ್ನಾಳ್ ಟೀಂ, ದಿಢೀರ್ ಸ್ಥಳ ಬದಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಯತ್ನಾಳ್, ಯು.ಬಿ.ಸಿಟಿಯ ಅಪಾರ್ಟ್ಮೆಂಟ್ನ ಸಿದ್ದೇಶ್ವರ್ ನಿವಾಸದಲ್ಲಿ ಗೌಪ್ಯ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮುಖಂಡ ಎನ್.ಆರ್.ಸಂತೋಷ್ ಮತ್ತಿತರರು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಯತ್ನಾಳ್ ಉಚ್ಛಾಟನೆ ತೆರವುಗೊಳಿಸುವ ಮತ್ತು ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುವ ಸಂಬಂಧ ಚರ್ಚೆ ನಡೆಸುವುದರ ಜೊತೆಗೆ ತಮ್ಮ ಮುಂದಿನ ನಡೆ ಬಗ್ಗೆಯೂ ನಾಯಕರು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಭೆಯ ನಂತರ ಯತ್ನಾಳ್ ಅಥವಾ ಅವರ ಬೆಂಬಲಿಗರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವರೇ ಎಂಬ ಕುತೂಹಲವಿದೆ.