ಬೆಂಗಳೂರು: ”ಮನೆ ಬಾಗಿಲಿಗೆ ಉಚಿತವಾಗಿ ಖಾತೆ ವಿತರಣೆ, ಬೀದಿಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ ಮಾಡಲಾಗುವುದು. ಅಲ್ಲದೆ, ಅಕ್ರಮ ನಿರ್ಮಾಣಗಳ ಪತ್ತೆಗೆ ‘ಎಐʼ ತಂತ್ರಜ್ಞಾನದ ಬಳಕೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರ ಜೊತೆ ವಿಕಾಸಸೌಧದಲ್ಲಿ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಎಂ, ”ನಗರದ ಸುಮಾರು 7 ಲಕ್ಷ ಮನೆಗಳು ತೆರಿಗೆ ಕಟ್ಟಿರಲಿಲ್ಲ, ಇವುಗಳಲ್ಲಿ 1 ಲಕ್ಷ ಮನೆಗಳು ತೆರಿಗೆ ವ್ಯಾಪ್ತಿಗೆ ಬಂದಿದ್ದು, ಇನ್ನೂ 6 ಲಕ್ಷ ಮನೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕಿದೆ. ಆದ ಕಾರಣ ಒಂದು ಬಾರಿ ಪಾವತಿಗೆ ಅವಕಾಶ (ಓಟಿಎಸ್) ಮಾಡಿಕೊಡಲಾಯಿತು. ಅಕ್ರಮ ನಿರ್ಮಾಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಪಾಲಿಕೆಗೆ ಇರಲಿಲ್ಲ. ಕಳೆದ ವಾರ ಸದನದಲ್ಲಿ ಈ ಬಗ್ಗೆ ವಿಧೇಯಕ ಅಂಗೀಕಾರವಾಗಿದೆ. ಜೊತೆಗೆ ಕಂದಾಯ ಬಡಾವಣೆಗಳಲ್ಲಿ ಇರುವ ಖಾಸಗಿ ರಸ್ತೆಗಳನ್ನೂ ಸಹ ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಲಾಗುವುದು” ಎಂದರು.
ಎಐ ಮೂಲಕ ಅಕ್ರಮ ನಿರ್ಮಾಣಗಳ ಪತ್ತೆ : ”ನಗರದಲ್ಲಿ ಉತ್ತಮ ತೆರಿಗೆ ಸಂಗ್ರಹವಾಗಬೇಕು. ನೀರು, ರಸ್ತೆ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ನೀಡಿದ್ದೇವೆ. ಆದರೆ ಅನೇಕರು ಇದಕ್ಕೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿಸ್ತೀರ್ಣದ ಹಾಗೂ ಮಹಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಇಂತಹ ಅಕ್ರಮಗಳನ್ನು ʼಎಐʼ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಕಟ್ಟಡವನ್ನು ಎಷ್ಟು ವಿಸ್ತೀರ್ಣ, ಎತ್ತರ ಕಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಜತೆಗೆ ಪ್ರತಿಯೊಂದು ಮನೆಯ ದಾಖಲೆಯೂ ಸಿಗುತ್ತದೆ” ಎಂದು ವಿವರಿಸಿದರು.
Laxmi News 24×7