ಬೆಂಗಳೂರು: ಇತರರ ಗುರುತಿನ ಕಳವು ಮಾಡಿ ವಂಚಿಸಿದ್ದ ಆರೋಪ ಹೊತ್ತಿರುವ ವಿದ್ಯಾರ್ಥಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ವಾಟ್ಸ್ಆ್ಯಪ್ ಮೂಲಕ ಜಾರಿ ಮಾಡಿದ್ದ ನೋಟಿಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ವಿದ್ಯಾರ್ಥಿ ಪವನ್ ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 (ಬಿಎನ್ಎಸ್ಎಸ್) ಅಥವಾ ಹಿಂದಿನ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ವಾಟ್ಸ್ಆ್ಯಪ್ಗಳ ಮೂಲಕ ನೋಟಿಸ್ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ತಿಳಿಸಿ, ನೋಟಿಸ್ ರದ್ದುಗೊಳಿಸಿ ಆದೇಶಿಸಿದೆ. ನೋಟಿಸ್ ರದ್ದುಗೊಳಿಸುತ್ತಿದ್ದು, ಹೊಸದಾಗಿ ವಿಚಾರಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಿ ಆದೇಶಿಸಿದೆ.
ಬಿಎನ್ಎಸ್ಎಸ್ ಸೆಕ್ಷನ್ 35 ಅಥವಾ ಸಿಆರ್ಪಿಸಿಯ ಸೆಕ್ಷನ್ 41 ಎ ಪ್ರಕಾರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಯನ್ನು ಬಂಧಿಸುವ ಅಗತ್ಯವಿಲ್ಲದ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಬಹುದಾಗಿದೆ. ಆದರೆ, ಕಳೆದ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ನೋಟಿಸ್ ನೀಡುವಲ್ಲಿ ಪೊಲೀಸರು ವಾಟ್ಸ್ಆ್ಯಪ್ ಅಥವಾ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಬಳಸುವಂತಿಲ್ಲ ಎಂಬುದಾಗಿ ತಿಳಿಸಿದೆ. ಹೀಗಾಗಿ, ಈ ಪ್ರಕ್ರಿಯೆನ್ನು ಅನುಮತಿಸಲಾಗುವುದಿಲ್ಲ ಎಂಬುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
Laxmi News 24×7