ಬೆಂಗಳೂರು: “ನಾನು ಜೀವನದಲ್ಲಿ ಪುಸ್ತಕ ಹಿಡಿದು ಓದಿದವನಲ್ಲ, ಶಾಲೆಯಲ್ಲಿ ಹೇಗೋ ಅಲ್ಪಸ್ವಲ್ಪ ಓದಿ ಪಾಸ್ ಆದೆ. ಡಿಗ್ರಿಯಲ್ಲಿರುವಾಗ ಓದಲೇ ಇಲ್ಲ. ನಾನು ಮಂತ್ರಿಯಾದ ನಂತರ ಮುಕ್ತ ವಿವಿಯಲ್ಲಿ ಪದವಿ ಪಡೆದೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಆಯೋಜಿಸಿರುವ ಪುಸ್ತಕ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಮೊದಲ ಬಾರಿಗೆ ವಿಧಾನ ಸಭೆಗೆ ಬಂದಾಗ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ನಾಣಯ್ಯ ಅವರಂತಹ ಘಟಾನುಘಟಿಗಳು ಮಾತನಾಡುವಾಗ ನಾನು ಹೆಚ್ಚು ಓದಬೇಕಿತ್ತು ಎಂದು ಅನ್ನಿಸಿತ್ತು” ಎಂದು ಹೇಳಿದರು.
ನಾನು ಓದಬೇಕು ಎಂದು ಪುಸ್ತಕ ಖರೀದಿ ಮಾಡುತ್ತೇನೆ. ಆದರೆ ಒಂದು ಪುಟ ಓದುವುದರೊಳಗೆ ಸುಸ್ತಾಗುತ್ತೇನೆ. ನಮ್ಮ ಮುಖ್ಯಮಂತ್ರಿಗಳು ದಿನ ಬೆಳಗ್ಗೆ ಪತ್ರಿಕೆ ಹಾಗೂ ಹೆಚ್ಚು ಪುಸ್ತಕ ಓದುತ್ತಾರೆ ಎಂದು ಕೇಳಿದ್ದೇನೆ ಎಂದರು.
“ಪುಸ್ತಕಗಳು ಜ್ಞಾನದ ಭಂಡಾರ. ಈಗ ಮೊಬೈಲ್ ಫೋನ್ಗಳು ಬಂದಿದ್ದು, ಎಲ್ಲಾ ಮಾಹಿತಿಗಳು ಅಂಗೈಯಲ್ಲಿ ಲಭ್ಯವಿದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ. ಆದರೂ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳಬೇಕು” ಎಂದು ಹೇಳಿದರು.
Laxmi News 24×7