Breaking News

ಕನ್ನಡ ಅಲ್ಲ, ಮರಾಠಿಯಲ್ಲಿ ಮಾತಾಡು ಎಂದು ಧಮ್ಕಿ ಹಾಕಿದ ಯುವಕರು ಬಸ್ ಕಂಡಕ್ಟರ್ ಮೇಲೆ ಹಲ್ಲೆ

Spread the love

ಬೆಳಗಾವಿ: ವಿಶ್ವ ಮಾತೃಭಾಷೆ ದಿನವಾದ ಇಂದು “ಮರಾಠಿ ಭಾಷೆಯಲ್ಲಿ ಮಾತನಾಡು” ಎಂದು ಧಮ್ಕಿ ಹಾಕಿ ‌ಕಿಡಿಗೇಡಿಗಳು ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಗಲಾಟೆ ನಡೆದಿದೆ. ಬಸ್‌ ನಿರ್ವಾಹಕ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ (51) ಹಲ್ಲೆಗೊಳಗಾಗಿದ್ದಾರೆ. ಮಾಧ್ಯಮಗಳೆದುರು ಗಾಯಾಳು ನಿರ್ವಾಹಕ ಕಣ್ಣೀರು ಹಾಕಿ ಘಟನೆಯನ್ನು ವಿವರಿಸಿದರು.

ಅದೇ ರೀತಿ, ಬಸ್ ಚಾಲಕ ಕತಾಲ್ ಸಾಬ್ ಮೊಮಿನ್ ಅವರ ಮೇಲೂ ಕಿಡಿಗೇಡಿಗಳು ಹಲ್ಲೆ ಮಾಡಿದ್ದು, ಅವರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ ಮಾಹಿತಿ ಪಡೆದರು.ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮಾತನಾಡಿ,‌ “ಬಿಕೆ ಬಾಳೇಕುಂದ್ರಿಗೆ ಸಿಬಿಟಿಯಿಂದ ಯುವಕ ಮತ್ತು ಯುವತಿ ಬಸ್ ಹತ್ತಿದ್ರು. ಇಬ್ಬರದ್ದೂ ಫ್ರೀ ಟಿಕೆಟ್.​ ಆ ಹುಡುಗಿಯೇ ಟಿಕೆಟ್ ತೆಗೆದುಕೊಂಡಳು. ನಾನು ಟಿಕೆಟ್ ಕೊಟ್ಟುಬಿಟ್ಟಿದ್ದೆ. ಬೇರೆ ಪ್ರಯಾಣಿಕರು ಹೇಳಿದಾಗ ಆ ಯುವಕನ ಟಿಕೆಟ್ ದುಡ್ಡು ಕೊಟ್ಟಿರಲಿಲ್ಲ ಎಂಬುದು ಗೊತ್ತಾಯಿತು. ಹುಡುಗರಿಗೆ ಉಚಿತ ಟಿಕೆಟ್​ ನೀಡಿದರೆ ನನ್ನನ್ನು ಸಸ್ಪೆಂಡ್​ ಮಾಡುತ್ತಾರೆ, ನೀವು ಟಿಕೆಟ್​ ಪಡೆಯುವಾಗ ಸರಿಯಾಗಿ ಹೇಳಿ ತೆಗೆದುಕೊಳ್ಳಬೇಕು ಎಂದು ಆ ಹುಡುಗಿಗೆ ತಿಳಿ ಹೇಳಿದೆ. ಅದಕ್ಕೆ ಯುವತಿ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದು ನನಗೆ ಮರಾಠಿಯಲ್ಲೇ ಬೈದಳು. ಮುಂದೆ ಬಾಳೇಕುಂದ್ರಿ ಕೆಎಚ್ ಬರುತ್ತಿದ್ದಂತೆ ಅವರ ಕಡೆಯ 20 ಜನರು ನನ್ನ ಮೇಲೆ ಹಲ್ಲೆ ಮಾಡಲು ಬಂದರು. ತಲೆ, ಮೈ, ಕೈಗೂ ಹೊಡೆದರು” ಎಂದು ಹೇಳಿದರು.

ಈ ಕುರಿತು ಡಿಸಿಪಿ‌ ರೋಹನ್ ಜಗದೀಶ ಪ್ರತಿಕ್ರಿಯಿಸಿ, “ಕನ್ನಡ ಮಾತಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಕಂಡಕ್ಟರ್ ಆರೋಪ ಮಾಡಿದ್ದಾರೆ. ಅವರ ಹೇಳಿಕೆಯ ಮೇಲೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಹಲ್ಲೆಗೈದ ಯುವಕರನ್ನು ವಶಕ್ಕೆ ಪಡೆದು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಂಡಕ್ಟರ್​ಗೆ ಹೆಚ್ಚು ಗಾಯವಾಗಿದ್ದು, ಚಾಲಕನಿಗೂ ಸ್ವಲ್ಪ ಗಾಯವಾಗಿದೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ಪೊಲೀಸರು ರಾಜಿಸಂಧಾನ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಂಡಕ್ಟರ್ ಹೇಳಿದ್ದಾರೆ. ಅದನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗಿದೆ.‌ ಅದನ್ನು ಪೊಲೀಸ್ ಆಯುಕ್ತರಿಗೆ ಒಪ್ಪಿಸುತ್ತೇವೆ. ತಪ್ಪೇನಾದರೂ ಕಂಡುಬಂದರೆ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಕ.ರ.ವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, “ಬೆಳಗಾವಿಯಲ್ಲಿ ಕೆಲವು ಗೂಂಡಾಗಳು ಕನ್ನಡ ಮಾತಾಡಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಪದೇ ಪದೇ ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದರೆ, ಕನ್ನಡ ಮಾತನಾಡಿದರೆ ಹೊಡೆಯುತ್ತಾರೆ. ಹೀಗಾಗಿ, ನಾವು ನಮ್ಮ ರಾಜ್ಯದಲ್ಲಿ ಇದ್ದೇವೋ ಅಥವಾ ಬೇರೆ ರಾಜ್ಯದಲ್ಲಿ ಇದ್ದೇವೋ ಎಂಬ ಅನುಮಾನ ಕಾಡುತ್ತಿದೆ. ಪೋಲಿಸ್ ಇಲಾಖೆ ಇಂಥ ಗೂಂಡಾಗಳ ಮೇಲೆ ಯಾಕೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ಪ್ರಶ್ನಿಸಿದರು.

“ಪ್ರತೀಬಾರಿ‌‌ ಇಂಥ ಘಟನೆಗಳು ನಡೆದಾಗ ಸುಮ್ಮನೆ ರಾಜಿ ಸಂಧಾನ‌ ಮಾಡಿ ಕಳಿಸುತ್ತಿದ್ದಾರೆ. ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಾವೇ ಹಲ್ಲೆ ಮಾಡಿದವರನ್ನು ವಿಚಾರಿಸಬೇಕಾಗುತ್ತದೆ. ಅದಕ್ಕೂ ಮೊದಲು ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಬೇಕು. ಅವರನ್ನು ಗಡೀಪಾರು ಮಾಡಬೇಕು. ಅಲ್ಲದೇ ಈ ಕುರಿತು ಸೂಕ್ತ ತನಿಖೆ ನಡೆಸಬೇಕು” ಎಂದು ದೀಪಕ್ ಗುಡಗನಟ್ಟಿ‌ ಒತ್ತಾಯಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ