ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ನಡೆಸುತ್ತಿರುವ 2023-24ನೇ ಸಾಲಿನ ಗ್ರೂಪ್ ಎ ಮತ್ತು ಬಿ ವೃಂದದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಗೆ ಹೊರಡಿಸಿದ್ದ ಅಧಿಸೂಚನೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಮತ್ತೆ ತಡೆ ನೀಡಿದೆ.
ಪವಿತ್ರ ಮತ್ತಿತರ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಮತ್ತು ಆಡಳಿತ ಸದಸ್ಯೆ ಡಾ.ಅಮಿತಾ ಪ್ರಸಾದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿದೆ.
ಅಲ್ಲದೆ, ಕಳೆದ ಜನವರಿ 30ರಂದು ಪೂರ್ವಭಾವಿ ಪರೀಕ್ಷಾ ಫಲಿತಾಂಶ ಪ್ರಕಟಿಸಿ ನೇಮಕ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದ್ದ ಕೆಎಟಿ ಇದೀಗ ಮುಖ್ಯ ಪರೀಕ್ಷೆ ನಡೆಸಲು ಆಯೋಗ ಜನವರಿ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ಅಮಾನತ್ತಿನಲ್ಲಿಡಲು ಆದೇಶಿಸಿದೆ.
ಮೇಲ್ನೋಟಕ್ಕೆ ಪ್ರಶ್ನೆಪತ್ರಿಕೆಗಳನ್ನು ಆಂಗ್ಲಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವಾಗ ದೋಷಗಳಾಗಿರುವುದು ಕಂಡುಬಂದಿದೆ ಮತ್ತು ಆಯೋಗವೂ ಕೂಡ ಅದನ್ನು ಒಪ್ಪಿಕೊಂಡು ಆ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು. ವರದಿ ಸಲ್ಲಿಸಿರುವ ಸಮಿತಿ, ಪ್ರಶ್ನೆ ಪತ್ರಿಕೆ ಭಾಷಾಂತರದಲ್ಲಿ ದೋಷಗಳಾಗಿವೆ ಎಂಬುದನ್ನು ದೃಢಪಡಿಸಿದೆ.
ಅಲ್ಲದೆ, ಈ ವಿಚಾರವನ್ನು ಬಗೆಹರಿಸುವಂತೆ ಸಮಿತಿ ವರದಿಯಲ್ಲಿ ಸಲಹೆ ನೀಡಿತ್ತು. ಹಿಂದಿನ ಈ ದೋಷಗಳನ್ನು ಸರಿಪಡಿಸದೆ ಹೇಗೆ ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯನ್ನು ನಡೆಸಲು ಅಧಿಸೂಚನೆ ಹೊರಡಿಸಿದೆ ಎಂದು ಪೀಠ ಪ್ರಶ್ನಿಸಿದೆ.
ಅಲ್ಲದೆ, ಈ ಸಂದರ್ಭದಲ್ಲಿ ಮುಖ್ಯ ಪರೀಕ್ಷೆಗೆ ಕೆಪಿಎಸ್‌ಸಿ ಹೊರಡಿಸಿರುವ ಅಧಿಸೂಚನೆಯನ್ನು ಅಮಾನತಿಯಲ್ಲಿಡುವುದೇ ಸೂಕ್ತ. ಹಾಗಾಗಿ ಜ.29ರಂದು ಆಯೋಗ ಮುಖ್ಯಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿ ಹೊರಡಿಸಿರುವ ಆದೇಶವನ್ನು ಮುಂದಿನ ವಿಚಾರಣೆವರೆಗೆ ಅಮಾನಲ್ಲಿಡುವಂತೆ ಆಯೋಗಕ್ಕೆ ನಿರ್ದೇಶನ ನೀಡಿ ಆದೇಶಿಸಿದೆ.
Laxmi News 24×7