ಬೆಳಗಾವಿ: ಬೆಳಕಿನ ಹಬ್ಬ ‘ದೀಪಾವಳಿ’ ಪ್ರಯುಕ್ತ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು.
ಗಣಪತ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ, ಖಡೇಬಜಾರ್, ಪಾಂಗುಳ ಗಲ್ಲಿ ಮತ್ತಿತರ ಮಾರುಕಟ್ಟೆ ಪ್ರದೇಶಗಳು ಜನರಿಂದ ಕಿಕ್ಕಿರಿದು ತುಂಬಿದ್ದವು.
ಬೆಳಗಾವಿ ನಗರವಷ್ಟೇ ಅಲ್ಲದೆ, ಗ್ರಾಮೀಣ ಭಾಗದಿಂದಲೂ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಜನರು, ಆಲಂಕಾರಿಕ ವಸ್ತುಗಳು, ಹಣತೆಗಳು, ಬಣ್ಣ-ಬಣ್ಣದ ರಂಗೋಲಿ ಪುಡಿ, ಶಿವಾಜಿ ಮೂರ್ತಿಗಳು, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ವೈವಿಧ್ಯಮಯ ವಿನ್ಯಾಸಗಳ ಆಕಾಶಬುಟ್ಟಿಗಳ ಖರೀದಿಗೂ ಮುಗಿಬಿದ್ದಿದ್ದರು.
ಹಳೇ ಪಿ.ಬಿ. ರಸ್ತೆ ಮತ್ತು ಕಾಕತಿವೇಸ್ ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ಹೂವು, ಹಣ್ಣು, ಬಾಳೆದಿಂಡಿನ ಮಾರಾಟ ಜೋರಾಗಿತ್ತು. ₹100ಕ್ಕೆ ಒಂದು ಮಾರು ಚೆಂಡು ಹೂವು, ₹50ಕ್ಕೆ 4 ಬಾಳೆದಿಂಡು, ₹80ಕ್ಕೆ 5 ಕಬ್ಬಿನ ಗೊಣೆ ಮಾರಾಟವಾದವು.
ನಗರದ ವಿವಿಧ ಬಟ್ಟೆ ಅಂಗಡಿಗಳಲ್ಲೂ ಜನಸಂದಣಿ ಹೆಚ್ಚಿತ್ತು. ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ತಮ್ಮಿಷ್ಟದ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದರು.
‘ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮವಾಗಿ ವ್ಯಾಪಾರವಾಗುತ್ತಿದೆ. ವಿವಿಧೆಡೆಯಿಂದ ಬರುತ್ತಿರುವ ಜನ ಪೂಜೆಗೆ ಬೇಕಿರುವ ಹೂವು ಖರೀದಿಸುತ್ತಿದ್ದಾರೆ. ಒಂದಿಷ್ಟು ಆದಾಯ ಸಿಗಲಿದೆ’ ಎಂದು ವ್ಯಾಪಾರಿ ಸಮೀರ್ ಅತ್ತಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘₹80ಕ್ಕೆ 5 ಕಬ್ಬಿನ ಗೊಣೆ ಮಾರುತ್ತಿದ್ದೇನೆ. ಚೌಕಾಸಿ ಮಧ್ಯೆಯೂ ಜನ ಖರೀದಿ ಮಾಡುತ್ತಿದ್ದಾರೆ’ ಎಂದು ವ್ಯಾಪಾರಿ ರೇಣುಕಾ ಹೇಳಿದರು.
ಗುರುವಾರ ಮತ್ತು ಶುಕ್ರವಾರ ಎರಡೂ ದಿನ ಅಮಾವಾಸ್ಯೆ ಇದೆ. ಹಾಗಾಗಿ ಕೆಲವರು ತಮ್ಮ ಮನೆಗಳು ಮತ್ತು ಅಂಗಡಿಗಳಲ್ಲಿ ಗುರುವಾರವೇ ಲಕ್ಷ್ಮಿ ಪೂಜೆ ನೆರವೇರಿಸಿದರೆ, ಇನ್ನೂ ಕೆಲವರು ಶುಕ್ರವಾರ ನೆರವೇರಿಸಲು ಸಿದ್ಧತೆ ನಡೆಸಿದ್ದಾರೆ.