Breaking News
Home / Uncategorized / ಬಳಸಿದ ಬಟ್ಟೆಗಳ ಮರುಬಳಕೆ ಪ್ರಯತ್ನ: ಮಂಗಳೂರಿನಲ್ಲಿ ವಿಶೇಷ ಅಭಿಯಾನ

ಬಳಸಿದ ಬಟ್ಟೆಗಳ ಮರುಬಳಕೆ ಪ್ರಯತ್ನ: ಮಂಗಳೂರಿನಲ್ಲಿ ವಿಶೇಷ ಅಭಿಯಾನ

Spread the love

ಮಂಗಳೂರು: ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಕೆಯಾಗುವ ಬಟ್ಟೆಗಳೊಂದಿಗೆ ಬಳಕೆಯಾಗದ ಬಟ್ಟೆಗಳೂ ಇರುತ್ತವೆ.

ಆದರೆ ಇಂತಹ ಬೇಡದ ಬಟ್ಟೆಗಳು ಕೊನೆಗೆ ಮಣ್ಣು, ಹೊಳೆ, ಸಮುದ್ರ ಸೇರಿ ಪರಿಸರ ನಾಶಕ್ಕೆ ಕಾರಣವಾಗುತ್ತದೆ. ಆದರೆ ಮಂಗಳೂರಿನ ಪರಿಸರಾಸಕ್ತ ಜೀತ್ ಮಿಲನ್ ರೋಚ್, ಲೂಯಿ ಪಿಂಟೊ ಹಾಗೂ ತಂಡ ಇಂತಹ ಮರುಬಳಕೆಯಾಗುವ ಬಟ್ಟೆಗಳನ್ನು ಸಂಗ್ರಹಿಸಿ ಅಗತ್ಯವುಳ್ಳವರಿಗೆ ಉಚಿತವಾಗಿ ನೀಡುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಈ ಮೂಲಕ ಪರಿಸರ ಉಳಿಸುವತ್ತ ದೂರದೃಷ್ಟಿತ್ವ ಇರಿಸಿಕೊಂಡಿದ್ದಾರೆ.

ಆರು ತಿಂಗಳ ಹಿಂದೆ ಈ ಪರಿಸರಾಸಕ್ತರ ತಂಡ ‘ಫಾರ್ ಅವರ್ ಸಿಸ್ಟರ್ಸ್’ ಎಂಬ ಪರಿಕಲ್ಪನೆಯಡಿಯಲ್ಲಿ ಅಭಿಯಾನ ನಡೆಸಿತ್ತು. ಅಭಿಯಾನದಲ್ಲಿ 25 ಸಾವಿರಕ್ಕೂ ಅಧಿಕ ಸೀರೆಗಳನ್ನು ಸಂಗ್ರಹಿಸಿ ತ್ಯಾಜ್ಯ ಸಂಗ್ರಹಿಸುವ, ಪೌರ ಕಾರ್ಮಿಕರು, ಆಶ್ರಮವಾಸಿಗಳಿಗೆ ತಂಡ ನೀಡಿತ್ತು. ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು.

ಇದರಿಂದ ಪ್ರೇರಣೆಗೊಂಡು ಈ ಬಾರಿ ‘ವನ್ ಫಾರ್ ಮೈ ಬ್ರದರ್ಸ್’ ಪರಿಕಲ್ಪನೆಯಡಿ ಪುರುಷರ ಬಟ್ಟೆಗಳನ್ನು ಸಂಗ್ರಹಿಸುವ ಕಾರ್ಯವು ಭರದಿಂದ ಸಾಗಿದೆ. ಬಟ್ಟೆಗಳನ್ನು 125 ಚರ್ಚ್‌ಗಳ ಧರ್ಮಪ್ರಾಂತ್ಯದ ದಾನಿಗಳಿಂದ, ಹಿತೈಷಿಗಳು, ಸಮಾನ ಮನಸ್ಕರ ಸಹಕಾರದಿಂದ ಸಂಗ್ರಹಿಸಲಾಗಿದೆ. ಈಗಾಗಲೇ ಸುಮಾರು 23 ಸಾವಿರದಷ್ಟು ಪುರುಷರ ಉಡುಪು ಸಂಗ್ರಹವಾಗಿದೆ.

ಒಂದೆರಡು ಬಾರಿ ಬಳಸಿ ಮೂಲೆಗುಂಪಾದ ಬಟ್ಟೆಗಳು, ವಿವಿಧ ಬಗೆಯ ಬ್ರ್ಯಾಂಡ್​ಗಳ ಉಡುಪುಗಳು ಇಲ್ಲಿನ ಸಂಗ್ರಹದಲ್ಲಿವೆ. ಬಟ್ಟೆಗಳನ್ನು ನೀಡಿದವರೆಲ್ಲರೂ ಸುಸ್ಥಿತಿಯಲ್ಲಿರುವುದನ್ನೇ ನೀಡಿರುವುದು ವಿಶೇಷ. ಯಾರೂ ತೀರಾ ಹಳತಾಗಿರುವ ಉಡುಪುಗಳನ್ನು ನೀಡಿಲ್ಲ. ಮಂಗಳೂರಿನ ರೋಶನಿ ನಿಲಯದ ಬಿಎಸ್​ಡಬ್ಲ್ಯೂ ವಿದ್ಯಾರ್ಥಿಗಳು ಬಟ್ಟೆಗಳನ್ನು ಒಪ್ಪ ಓರಣವಾಗಿ ಪ್ಯಾಕ್ ಮಾಡುತ್ತಿದ್ದಾರೆ. ಬಳಿಕ ಈ ಬಟ್ಟೆಗಳು ರಾಜ್ಯದ ವಿವಿಧ ಪ್ರದೇಶಗಳಿಗೆ ರವಾನೆಯಾಗಿ ಅಗತ್ಯವುಳ್ಳವರ ಕೈಸೇರಲಿದೆ.

ಈ ಬಗ್ಗೆ ಮಾತನಾಡಿದ ಪರಿಸರವಾದಿ ಜೀತ್ ಮಿಲನ್, ನಾವು ರೀಯೂಸ್, ರೆಫ್ಯೂಸ್, ರೀಸೈಕಲ್ ಉದ್ದೇಶ ಇಟ್ಟುಕೊಂಡು ಆರು ತಿಂಗಳ ಫಾರ್ ಮೈ ಸಿಸ್ಟರ್ ಎಂಬ ಪ್ರಯೋಗ ಮಾಡಿದ್ದೆವು. ಸಾರಿ ದಾನ್ ಎಂಬ ಅಭಿಯಾನದಡಿ 20 ಸಾವಿರಕ್ಕೂ ಅಧಿಕ ಸೀರೆಗಳು ಬಂದಿದ್ದವು. ಅದನ್ನು ಪೌರ ಕಾರ್ಮಿಕರಿಗೆ, ಹಿಂದುಳಿದ ವರ್ಗದವರಿಗೆ ನೀಡಿದ್ದೆವು. ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಒಂದು ಜೀನ್ಸ್ ತಯಾರಾಗಬೇಕಾದರೆ ಒಂದೂವರೆ ಸಾವಿರ ಲೀಟರ್ ನೀರು ಬೇಕಾಗುತ್ತದೆ. ಟೀ ಶರ್ಟ್ ಮಾಡಲು 700 ಲೀಟರ್ ನೀರು ಬೇಕಾಗುತ್ತದೆ. ಯೋಜನೆಯಿಂದ ಪರಿಸರಕ್ಕೆ ತುಂಬಾ ಉಪಯೋಗವಿದೆ. ಮೊದಲ ಪ್ರಾಜೆಕ್ಟ್ ಯಶಸ್ಸಿನಿಂದ ಪ್ರೇರಿತರಾಗಿ ವನ್ ಫಾರ್ ಮೈ ಬ್ರದರ್ ಎಂಬ ಯೋಜನೆ ಆರಂಭಿಸಿದ್ದೇವೆ. ಈಗಾಗಲೇ 23 ಸಾವಿರ ಬಟ್ಟೆಗಳು ಬಂದಿವೆ. ಸೀರೆಯನ್ನು ವಿತರಿಸಿದ ರೀತಿಯಲ್ಲಿ ನೀಡಲಾಗುವುದು. ತ್ಯಾಜ್ಯ ಸಂಗ್ರಹಣ ಘಟಕಕ್ಕೆ ತುಂಬಾ ಬಟ್ಟೆಗಳು ವೇಸ್ಟ್ ರೂಪದಲ್ಲಿ ಬರುತ್ತಿತ್ತು. ಹಸಿ ಕಸ ಮತ್ತು ಒಣ ಕಸ ವಿಂಗಡನೆ ಮಾಡಿ ಸಂಸ್ಕರಿಸಬಹುದು. ಆದರೆ ಬಟ್ಟೆಗಳನ್ನು ಸಂಸ್ಕರಿಸಲು ಸಾಧ್ಯವಿಲ್ಲ. ಮರು ಬಳಕೆ ಮಾಡುವುದೇ ಪರಿಹಾರವಾಗಿರುವುದರಿಂದ ಈ ಯೋಜನೆ ಮಾಡಿದ್ದೇವೆ ಎನ್ನುತ್ತಾರೆ.

ವಿಶೇಷವೆಂದರೆ, ಹೀಗೆ ಬಟ್ಟೆಗಳನ್ನು ಮರುಬಳಕೆ ಮಾಡುವುದರಿಂದ ಬಡವರಿಗೆ ಸಹಕಾರವಾಗುವುದು ಮಾತ್ರವಲ್ಲ ನೀರಿನ ಉಳಿತಾಯವೂ ನಡೆಯಲಿದೆ. ಅಂದರೆ ಒಂದೊಂದು ಜೀನ್ಸ್, ಟೀ ಶರ್ಟ್ ತಯಾರಾಗಬೇಕಾದರೂ ಸಾಕಷ್ಟು ನೀರು ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ ಈ ರೀತಿ ಮರುಬಳಕೆ ಆರ್ಥಿಕತೆಗೂ ಸಹಕಾರವಾಗಲಿದೆ. ಆದ್ದರಿಂದ ಈ ಪ್ರಯತ್ನ ಬಡವರಿಗೆ ಸಹಾಯವಾಗುವುದರೊಂದಿಗೆ ಪರಿಸರ ನಾಶ ತಡೆಗಟ್ಟುವಲ್ಲಿಯೂ ಸಹಕಾರಿಯಾಗಲಿದೆ.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ