Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ: ಕಣ್ಣಿದ್ದವರಗಿಂತ ಕಣ್ಣಿಲ್ಲದವರೇ ಸಮರ್ಥರು

ಬೆಳಗಾವಿ: ಕಣ್ಣಿದ್ದವರಗಿಂತ ಕಣ್ಣಿಲ್ಲದವರೇ ಸಮರ್ಥರು

Spread the love

ಬೆಳಗಾವಿ: ‘ಕಣ್ಣಿದ್ದವರಗಿಂತ ಕಣ್ಣಿಲ್ಲದವರೇ ಹೆಚ್ಚು ಸಮರ್ಥರು. ಅವರ ಆಲೋಚನಾ ಶಕ್ತಿ ಅಪರಿಮಿತ. ಸಾಮಾನ್ಯರಿಗಿಂತ ಹತ್ತು ಪಟ್ಟು ಬುದ್ಧಿವಂತಿಕೆ ಅವರಲ್ಲಿ ಇರುತ್ತದೆ. ಹಾಗಾಗಿ, ಯಾರನ್ನೂ ಹಗುರವಾಗಿ ಕಾಣಬಾರದು’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.

 

ನಗರದಲ್ಲಿ ಶನಿವಾರ ನಡೆದ ಸಮರ್ಥನಂ ಅಂಗವಿಕಲರ ಸಂಸ್ಥೆ, ಪ್ರಜಾವಾಣಿ, ಇಂಡಸ್‌ಇಂಡ್‌ ಬ್ಯಾಂಕ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌, ಕ್ರಿಕೆಟ್‌ ಅಸೋಸಿಯೇಷನ್‌ ಫಾರ್‌ ದಿ ಬ್ಲೈಂಡ್‌ ಸಹಯೋಗದಲ್ಲಿ ಆಯೋಜಿಸಿದ ಐದು ದಿನಗಳ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ಅಂಧ ಆಟಗಾರರ ಸಾಮರ್ಥ್ಯ ಗೊತ್ತಾಗಬೇಕೆಂದರೆ ಅವರ ಕ್ರಿಕೆಟ್‌ ನೋಡಬೇಕು. ನನಗೆ ಬಾಲ್ಯದಿಂದಲೂ ಕ್ರಿಕೆಟ್‌ ನೋಡುವ ಗೀಳು ಇಲ್ಲ. ಆದರೆ, ಅಂಧರು ಹೇಗೆ ಕ್ರಿಕೆಟ್‌ ಆಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಹಾಗಾಗಿ, ನಾನು ಖುದ್ದಾಗಿ ಮೈದಾನಕ್ಕೆ ಬಂದು ಕ್ರಿಕೆಟ್ ನೋಡುತ್ತೇನೆ’ ಎಂದೂ ಅವರು ಪ್ರೋತ್ಸಾಹಿಸಿದರು.

‘ಸಮರ್ಥನಂ ಅಂಗವಿಕಲರ ಸಂಸ್ಥೆ ಕಟ್ಟಿದ ಮಹಾಂತೇಶ ಕಿವಡಸನ್ನವರ ಅವರು ನನ್ನ ಶಿಷ್ಯ. ಶಿಷ್ಯ ಎಂದು ಹೇಳಿಕೊಳ್ಳಲು, ನಮ್ಮ ಜಿಲ್ಲೆಯ ಪ್ರತಿಭೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಕ್ರಿಕೆಟ್‌ ಪ್ರತಿಭೆಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ವ್ಯಕ್ತಿತ್ವ ಅವರದು. ಇತರ ಅಂಧರಿಗೂ ಪ್ರೇರಣೆ’ ಎಂದರು.

ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಕಿವಡಸನ್ನವರ ಮಾತನಾಡಿ, ‘ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಅಂಧರ ತಂಡ ಮೂರು ಬಾರಿ ವಿಜಯ ಸಾಧಿಸಿದೆ. ಏಕದಿನ
ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಎರಡು ಬಾರಿ ಗೆದ್ದಿದೆ. ವಿಶ್ವದ ಬಲಿಷ್ಠ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಬೆಳಗಾವಿಯಲ್ಲಿ ಆಯೋಜಿಸಿದ ಪಂದ್ಯದಲ್ಲೂ ಭಾರತ ತಂಡದ ಆಟಗಾರರು ಆಡಲಿದ್ದಾರೆ. ಇಂಥವರಿಂದ ಸ್ಫೂರ್ತಿ ಪಡೆದು ಅಂಧ ಮಕ್ಕಳು ಮುಂದೆ ಬರಬೇಕು’ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಕ್ರಿಕೆಟಿಗ ಸೋಮಶೇಖರ ಶಿರಗುಪ್ಪಿ, ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ನ ಎಲ್‌ಪಿಜಿ ವಿಭಾಗೀಯ ಮುಖ್ಯಸ್ಥೆ ಲಲಿತಾ ವಡ್ಲಮನಿ, ಏಕಸ್ ಕಂಪನಿ ಕನ್ಸಲ್ಟಂಟ್ ಮಹಾಂತೇಶ ಪಾಟೀಲ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಪೌಲ್ ಮುದ್ಧಾ ಮಾತನಾಡಿದರು. ಸಮರ್ಥನಂ ಸಂಸ್ಥೆಯ ಟ್ರಸ್ಟಿ ವೈ.ಉದಯಕುಮಾರ, ಬೆಳಗಾವಿ ಶಾಖೆಯ ಮುಖ್ಯಸ್ಥ ಎಂ.ಜಿ.ಅರುಣಕುಮಾರ್, ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಕಾರ್ಯದರ್ಶಿ ಆನಂದ ಜೋಶಿ, ವೀರೇಶ ಕಿವಡಸನ್ನವರ, ‘ಪ‍್ರಜಾವಾಣಿ’ ಜಿಲ್ಲಾ ವರದಿಗಾರ ಸಂತೋಷ ಈ. ಚಿನಗುಡಿ ಇದ್ದರು.

ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಸುನೀತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಧೀರಜ್‌ ವಂದಿಸಿದರು. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದ ಆಟಗಾರರೂ
ಹಾಜರಿದ್ದರು.

*

 


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ