Home / Uncategorized / ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

Spread the love

ಬೆಂಗಳೂರು,ಸೆ.8- ಜನಸಾಮಾನ್ಯರಿಗೆ ಹೊರೆಯಾಗುವಂತಹ ಬೆಲೆ ಏರಿಕೆ ಹಾಗೂ ಇತರ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬೆಂಗಳೂರು ದಕ್ಷಿಣ, ಉತ್ತರ ಮತ್ತು ಕೇಂದ್ರ ಕಾಂಗ್ರೆಸ್ ಜಿಲ್ಲೆಗಳಿಂದ ನಗರದ ಆನಂದರಾವ್ ವೃತ್ತದಿಂದ ರಾಜಭವನ ಚಲೋ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಶಾಸಕಿ ಸೌಮ್ಯಾರೆಡ್ಡಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಡುಗೆ ಅನಿಲ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಯ ಅಂಗವಾಗಿ ರಸ್ತೆಯಲ್ಲೇ ಸೌಧೆ ಒಲೆಯಿಟ್ಟು, ತರಕಾರಿಗಳೊಂದಿಗೆ ಅಡುಗೆ ಮಾಡುವ ಅಣಕು ಪ್ರದರ್ಶನ, ಬೈಕ್, ಕಾರುಗಳನ್ನು ಎತ್ತಿನಗಾಡಿಯಲ್ಲಿಎಳೆಯುವ ಮೂಲಕ ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತ ಪಡಿಸಲಾಯಿತು. ಮಹಿಳೆಯರು ಸಿಲಿಂಡರ್ ಮಾದರಿಯನ್ನು ತಲೆ ಮೇಲೆ ಹೋತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ಬೆಲೆ ಏರಿಕೆ ಮಾಡಿದ್ದರೂ ಕೂಡ ಬಿಜೆಪಿಯ ನಾಯಕರಾಗಿದ್ದ ಮೋದಿ, ಯಡಿಯೂರಪ್ಪ, ಶೋಭಾಕರಂದ್ಲಾಜೆ, ಸ್ಮೃತಿಇರಾನಿ ಸೇರಿದಂತೆ ಅನೇಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಆದರೆ, ಈಗ ಜನವಿರೋಧಿಯಾದ ಬೆಲೆ ಏರಿಕೆಯಾಗುತ್ತಿದ್ದರೂ ಯಾರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಾಡಿದ್ದ ಪೆಟ್ರೋಲ್ ಬಾಂಡ್ ಸಾಲ ತೀರಿಸಲು ದರ ಹೆಚ್ಚಳ ಅನಿವಾರ್ಯ ಎಂದು ಬಿಜೆಪಿಯವರು ಹೇಳಿದ ಸುಳ್ಳನ್ನೇ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. 10 ಸಾವಿರ ರೂಪಾಯಿ ಸಾಲ ತೀರಿಸಲು ನಾಲ್ಕು ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.

ನೇಪಾಳ, ಶ್ರೀಲಂಕ , ಭೂತಾನ್, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಎಲ್ಲಾ ನೆರೆಯ ದೇಶಗಳಲ್ಲೂ 60ರಿಂದ 70ರೂ.ಗೆ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ನಮ್ಮಿಂದ ಪೆಟ್ರೋಲ್, ಡಿಸೇಲ್ ಖರೀದಿಸುವ ಭೂತಾನ್, ನೇಪಾಳ ದೇಶಗಳೂ ತಮ್ಮಲ್ಲಿ 80 ರೂಪಾಯಿಗೆ ಪೆಟ್ರೋಲ್ ನೀಡುತ್ತಿದ್ದಾರೆ. ನಮ್ಮಲ್ಲೇಕೆ ಜನ ಸಾಮಾನ್ಯರ ಮೇಲೆ ಬರೆ ಹಾಕಲಾಗುತ್ತಿದೆ ಎಂದು ಪ್ರಶ್ನಿಸಿದರು. 135 ಕೋಟಿ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿಯವರು ದೇಶ ದ್ರೋಹಿಗಳು ಎಂದು ಆರೋಪಿಸಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಜೆಪಿ ಎಂದರೆ ಜನಸಂಘದವರು, ಜನಸಂಘದವರು ಬಂಡವಾಳಶಾಹಿಗಳು ಹಾಗೂ ಕಳ್ಳಸಾಗಾಣಿಕೆದಾರರ ಬೆಂಬಲದಿಂದ ಬೆಳೆದವರು ಎಂದು ಗಂಭೀರ ಆರೋಪ ಮಾಡಿದರು. ವಿಧಾನ ಪರಿಷತ್ ಮುಖ್ಯಸಚೇತಕ ನಾರಾಯಣಸ್ವಾಮಿ ಅವರು ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಬಡವರು, ಮಧ್ಯಮ ವರ್ಗದ ಬಗ್ಗೆ ಕಾಳಜಿ ಇಲ್ಲ. ಅವರ ಆದ್ಯತೆಗಳೇನಿದ್ದರೂ ಶ್ರೀಮಂತರ ಬಗ್ಗೆ ಮಾತ್ರ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ನಯಾ ಪೈಸೆ ಆರ್ಥಿಕ ನೆರವು ನೀಡಿಲ್ಲ ಎಂದು ಕಿಡಿಕಾರಿದರು.

ಮನಮೋಹನ್ ಸಿಂಗ್ ಸೇರಿದಂತೆ ಪ್ರತಿಯೊಬ್ಬ ಪ್ರಧಾನಿಯವರು ದೇಶದಲ್ಲಿ ಸಂಪನ್ಮೂಲ ಕ್ರೋಢಿಕರಣ ಮಾಡಿ, ರೈಲ್ವೆ ಮಾರ್ಗ, ವಿಮಾನನಿಲ್ದಾಣ, ಹೆದ್ದಾರಿಗಳನ್ನು ನಿರ್ಮಾಣ ಮಾರಿದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವುಗಳನ್ನೆಲ್ಲಾ ಮಾರಾಟ ಮಾಡುತ್ತಿದ್ದಾರೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಬಿಜೆಪಿ ದೇಶವನ್ನೇ ಮಾರಾಟ ಮಾಡಲು ಸಂಚು ರೂಪಿಸಿದೆ ಎಂದು ಕಿಡಿಕಾರಿದರು.

ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿ, ರಾಜ್ಯದ ಗೃಹ ಮಂತ್ರಿ ಅರಗಜ್ಞಾನೇಂದ್ರ ಅವರು ಕಾಂಗ್ರೆಸ್ಸಿಗರು ನನ್ನ ರೆಪ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕೃಷಿ ಸಚಿವರ ಮೇಲೆ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಅದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ವಿಚಾರಣೆ ಪೂರ್ಣಗೊಳ್ಳುವವರೆಗೂ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ಬಡವರಿಗೆ ದುರ್ದಿನಗಳು ಬಂದಿವೆ. ಅಂಬಾನಿ, ಅದಾನಿಗಳಿಗೆ ಅಚ್ಚೇದಿನ ಬಂದಿದೆ. ಕೋವಿಡ್ ಸಂದರ್ಭದಲ್ಲೂ ಕೂಡ ಸರ್ಕಾರ ಜನರಿಗೆ ಸ್ಪಂದಿಸಿಲ್ಲ. ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ ನೋಡಿದರೆ ಮಹಿಳೆಯರ ರಕ್ಷಣೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಪ್ರತಿಭಟನೆ ಹಾಗೂ ಮೆರವಣಿಗೆಯನ್ನು ಅರ್ಧಕ್ಕೆ ತಡೆದ ಪೊಲೀಸರು ನಾಯಕರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರನ್ನು ಅಕ್ಷರಶಃ ಹೊತ್ತೊಯ್ಯಲಾಯಿತು. ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ, ನೂಕಾಟ ಜೋರಾಗಿತ್ತು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ