Breaking News
Home / ರಾಜ್ಯ / ಇರೋಕೆ ಊಟ ಇಲ್ಲ, ಹೋಗೋಕೆ ಕಾಸಿಲ್ಲ : ಅಡಕತ್ತರಿಯಲ್ಲಿ ಅಂತರ ರಾಜ್ಯ ಕಾರ್ಮಿಕರ ಭವಿಷ್ಯ..!

ಇರೋಕೆ ಊಟ ಇಲ್ಲ, ಹೋಗೋಕೆ ಕಾಸಿಲ್ಲ : ಅಡಕತ್ತರಿಯಲ್ಲಿ ಅಂತರ ರಾಜ್ಯ ಕಾರ್ಮಿಕರ ಭವಿಷ್ಯ..!

Spread the love

ಬೆಂಗಳೂರು : ಅಂತರ ರಾಜ್ಯ ವಲಸಿಗರ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅಸ್ತು ಎಂದಿದೆ. ರಾಜ್ಯದಲ್ಲೂ ಅನ್ಯ ರಾಜ್ಯದ ಸಾವಿರಾರು ವಲಸಿಗರು ಸಿಲುಕಿಕೊಂಡಿದ್ದು, ತಮ್ಮ ಊರುಗಳಿಗೆ ಹೋಗಲು ಹಾತೊರೆಯುತ್ತಿದ್ದಾರೆ.

ಆದರೆ, ಹಲವು ವಲಸಿಗರಿಗೆ ತಮ್ಮ ತವರು ರಾಜ್ಯಕ್ಕೆ ಹೋಗುವ ರಹದಾರಿ ಕಠಿಣವಾಗಿದೆ. ಕೊರೊನಾ ಲಾಕ್‌ಡೌನ್​ನಿಂದ ವಲಸಿಗರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಒಂದು ಕಡೆ ಕೆಲಸ ಇಲ್ಲ, ಇನ್ನೊಂದೆಡೆ ವಸತಿ, ಆಹಾರ ಇಲ್ಲದೇ ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ.

ಆಯಾ ರಾಜ್ಯ ಸರ್ಕಾರ ವಲಸಿಗರಿಗೆ ಆಶ್ರಯ, ಊಟೋಪಚಾರ ನೀಡುತ್ತಿದ್ದರೂ, ವಲಸಿಗರು ತಮ್ಮ ತವರು ರಾಜ್ಯಗಳಿಗೆ ಹೋಗಲು ಹಾತೊರೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಸಾವಿರಾರು ಕಾರ್ಮಿಕರು ಸೇರಿದಂತೆ ಸಾವಿರಾರು ವಲಸಿಗರು ತಮ್ಮ ತವರು ರಾಜ್ಯಗಳಿಗೆ ಹೋಗಲಾಗದೇ ಪರದಾಡುತ್ತಿದ್ದಾರೆ‌. ಅವರಿಗೆ ಕೇಂದ್ರ ಸರ್ಕಾರದ ಸಡಿಲಿಕೆ ಈಗ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇತ್ತ ರಾಜ್ಯ ಸರ್ಕಾರವೂ ತಮ್ಮ ರಾಜ್ಯಗಳಿಗೆ ಹೋಗಲು ಇಚ್ಚಿಸುವವರನ್ನು ಅವರ ರಾಜ್ಯಗಳಿಗೆ ಕಳುಹಿಸಿ ಕೊಡುವ ಸಿದ್ಧತೆಯನ್ನು ಪ್ರಾರಂಭಿಸಿದೆ.

# ವಲಸಿಗರೇ ಬಸ್ ವೆಚ್ಚ ಭರಿಸಬೇಕು:
ತಮ್ಮ ತವರು ರಾಜ್ಯಗಳಿಗೆ ಹೋಗಲು ಇಚ್ಚಿಸುವವರು ಅವರೇ ಬಸ್ ವೆಚ್ಚವನ್ನು ಭರಿಸಬೇಕಾಗಿದೆ. ರಾಜ್ಯ ಸರ್ಕಾರ ವಲಸಿಗರಿಗೆ ಬಸ್ ವ್ಯವಸ್ಥೆಯನ್ನು ಮಾಡಲಿದೆ. ವಲಸಿಗರು ಕೆಎಸ್​ಆರ್​ಟಿಸಿ ಬಸ್​ನಲ್ಲಿ ತಮ್ಮ ರಾಜ್ಯಕ್ಕೆ ಹೋಗಲು ಬಸ್ ಬುಕ್ಕಿಂಗ್ ಮಾಡಬಹುದಾಗಿದೆ. ಅದರಂತೆ ಸಾಮಾಜಿಕ ಅಂತರ ಕಾಯ್ದುಕೊಂಡು, ಶೇ.50 ಪ್ರಯಾಣಿಕರೊಂದಿಗೆ ಅವರ ರಾಜ್ಯಗಳಿಗೆ ಬಸ್ ಮೂಲಕ ಕಳುಹಿಸಿ ಕೊಡಲಾಗುತ್ತದೆ.

ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯನ್ವಯ ಆಯಾ ರಾಜ್ಯದ ವಲಸಿಗರನ್ನು ಕಳುಹಿಸಿಕೊಡಲಾಗುತ್ತದೆ. ಅಲ್ಲಿನ ರಾಜ್ಯ ಸರ್ಕಾರಕ್ಕೆ ಬಸ್ ಮೂಲಕ ಬರುವ ಪ್ರಯಾಣಿಕರ ವಿವರವನ್ನು ರಾಜ್ಯ ಸರ್ಕಾರ ನೀಡಲಿದೆ. ಆದರೆ, ಬಸ್ ವೆಚ್ಚವನ್ನು ವಲಸಿಗರೇ ನೀಡಬೇಕು. ಸಹಜವಾಗಿ ಬಸ್ ದರವೂ ಹೆಚ್ಚಿರಲಿದೆ ಎಂದು ವಲಸಿಗರ ನೋಡಲ್ ಆಫೀಸರ್ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

# ಟಿಕೆಟ್ ಶುಲ್ಕ ನೀಡಲು ಕಾರ್ಮಿಕರಲ್ಲಿ ಹಣವಿಲ್ಲ:
ರಾಜ್ಯದಲ್ಲಿ ಈವರೆಗೆ ಗುರುತಿಸಲ್ಪಟ್ಟಂತೆ ಸುಮಾರು ವಿವಿಧ ರಾಜ್ಯಗಳ 1,17,730 ಕಾರ್ಮಿಕರು ರಾಜ್ಯದ ವಿವಿಧೆಡೆ ವಾಸವಾಗಿದ್ದಾರೆ. ಈ ಪೈಕಿ 92,559 ಹೊರ ರಾಜ್ಯದ ವಲಸೆ ಕಾರ್ಮಿಕರು ಬೆಂಗಳೂರು ನಗರದಲ್ಲೇ ಇದ್ದಾರೆ. ಸರ್ಕಾರದ ಅಂಕಿ ಅಂಶದ ಪ್ರಕಾರ ಸುಮಾರು 1,54,500 ವಲಸಿಗರು ರಾಜ್ಯದ ವಿವಿಧೆಡೆ ಸಿಲುಕಿಕೊಂಡಿದ್ದಾರೆ.

ಅವರೆಲ್ಲರೂ ಸದ್ಯ ರಿಲೀಫ್ ಕ್ಯಾಂಪ್​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಪೈಕಿ ಒಡಿಶಾದವರು ಅತಿ ಹೆಚ್ಚು ವಲಸೆ ಕಾರ್ಮಿಕರು ಅಂದರೆ 52,993 ಮಂದಿ ರಾಜ್ಯದಲ್ಲಿದ್ದಾರೆ. 37,446 ಬಿಹಾರಿ ಕಾರ್ಮಿಕರಿದ್ದಾರೆ. ಅದರಲ್ಲಿ ಬೆಂಗಳೂರಲ್ಲೇ 33,691 ಬಿಹಾರಿ ಕಾರ್ಮಿಕರು ವಾಸವಿದ್ದಾರೆ. ಜಾರ್ಖಂಡ್ ನಿಂದ 17,942 ಕಾರ್ಮಿಕರು, ಮಧ್ಯಪ್ರದೇಶ 2,583, ಉತ್ತರಪ್ರದೇಶದ 1,570, ಪಶ್ಚಿಮ ಬಂಗಾಳದ 2,310 ಕಾರ್ಮಿಕರನ್ನು ಗುರುತಿಸಲಾಗಿದೆ.

ಬಡ ಕಾರ್ಮಿಕರಲ್ಲಿ ಬಹುತೇಕರಲ್ಲಿ ತಮ್ಮ ರಾಜ್ಯಗಳಿಗೆ ಹೋಗಲು ಹಣವಿಲ್ಲ. ಕೆಲಸ ಇಲ್ಲದೇ ನಿರಾಶ್ರಿತರ ಕೇಂದ್ರಗಳಲ್ಲಿ ಕಾಲ ಕಳೆಯುತ್ತಿರುವ ಹಲವು ವಲಸಿಗರು ಬಸ್ ಟಿಕೆಟ್​ಗೆ ಹಣವಿಲ್ಲದೇ ಅವರ ರಾಜ್ಯದ ಸರ್ಕಾರವನ್ನು ನೆರವಿಗಾಗಿ ಅಂಗಲಾಚುತ್ತಿದ್ದಾರೆ.

ಹರಿಯಾಣದ ಕೆಲ ವಲಸಿಗರು ಬೆಂಗಳೂರಲ್ಲಿ ಸಿಲುಕಿಕೊಂಡಿದ್ದು, ತಮ್ಮನ್ನು ರಾಜ್ಯಕ್ಕೆ ಕರೆಸಿಕೊಳ್ಳುವಂತೆ ಅಲ್ಲಿನ ಸರ್ಕಾರವನ್ನು ಮನವಿ ಮಾಡಿದ್ದಾರೆ. ಈ ರೀತಿ ಹಲವು ಕಾರ್ಮಿಕರು, ವಲಸಿಗರಿಗೆ ಇದೀಗ ಹಣವಿಲ್ಲದೆ ತಮ್ಮ ರಾಜ್ಯಗಳಿಗೆ ಹೋಗುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ