ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ಪಿಪಿಇ ಕಿಟ್ ತಯಾರು ಮಾಡಿಕೊಂಡು ಆರೋಗ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತರೂ ಯಾರು ಬಂದಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬದಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಮಂಗಳವಾರ ಬೆಳಗ್ಗೆ 6-30ಕ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಜಿಲ್ಲೆಯ ಶಿಗ್ಗಾವಿ ಪಟ್ಟಣದ ದೇಸಾಯಿ ಗಲ್ಲಿ ನಿವಾಸಿ 75 ವರ್ಷದ ವೃದ್ಧೆ ಮತ್ತು ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ನಿವಾಸಿ 60 ವರ್ಷದ ವೃದ್ಧೆಯರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಹೆತ್ತ ಮಕ್ಕಳು, ಸಂಬಂಧಿಕರನ್ನು ಕರೆದರೂ, ಬಾರದ ಹಿನ್ನೆಲೆ ಆರೋಗ್ಯ ಇಲಾಖೆಯ ಹಾಗೂ ಜಿಲ್ಲಾಡಳಿತ ಸಿಬ್ಬಂದಿಯೇ ಅಂತ್ಯಕ್ರಿಯೆ ನಡೆಸಿದರು.
ಇಬ್ಬರು ಮೃತರ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಬೆಳಗ್ಗೆಯೇ ಜಿಲ್ಲಾಸ್ಪತ್ರೆ ವೈದ್ಯರು ಮಾಹಿತಿ ನೀಡಿ, ಮೃತರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಕೊಳ್ಳಿ, ಸಾಧ್ಯವಾಗದಿದ್ದರೆ ಶವ ಸಂಸ್ಕಾರದಲ್ಲಾದರೂ ಭಾಗವಹಿಸಿ ಎಂದು ತಿಳಿಸಿದ್ದರು. ಆದರೆ ಯಾವ ಸಂಬಂಧಿಕರೂ ಆಸ್ಪತ್ರೆ ಬಳಿ ಸುಳಿಯಲಿಲ್ಲ.
ಮೃತರ ಸಂಬಂಧಿಕರ ಐದು ಜನರಿಗೆ ಪಿಪಿಇ ಕಿಟ್ ಸೇರಿದಂತೆ ರಕ್ಷಣಾ ಸಾಮಗ್ರಿ ಒದಗಿಸುವುದಾಗಿ ಜಿಲ್ಲಾಡಳಿತ ಹಾಗೂ ಆಸ್ಪತ್ರೆಯ ಸಿಬ್ಬಂದಿ ಭರವಸೆ ನೀಡಿದ್ದರು. ಆದರೂ ಯಾರೂ ಅಂತ್ಯ ಕ್ರಿಯೆಗೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇಬ್ಬರು ಮೃತರ ಅಂತ್ಯಕ್ರಿಯೆ ನಡೆಸಿದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿವೆ. ಈ ವರೆಗೆ 118 ಪ್ರಕರಣಗಳು ಧೃಡಪಟ್ಟಿವೆ.