Breaking News

ಹಿಂದಿನಿಂದ ಬಂದು ಮಹಿಳೆಯರಿಗೆ ಕಾಂಗ್ರೆಸ್‌ ಚೂರಿ, ದೇಶದ ತಾಯಂದಿರು ಇವರನ್ನು ಕ್ಷಮಿಸಲ್ಲ: ಅನುರಾಗ್‌ ಠಾಕೂರ್‌

Spread the love

ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಸೋಲಲು ಕಾರಣರಾದ ಕಾಂಗ್ರೆಸ್ ಪಕ್ಷ  ಹಾಗೂ ಅವರ ಮಿತ್ರ ಪಕ್ಷದವರನ್ನು ದೇಶದ ತಾಯಂದಿರು ಮತ್ತು ಸೋದರಿಯರು ಯಾವತ್ತೂ ಕ್ಷಮಿಸಲಾರರು ಎಂದು ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಹಿಳಾ ವಿರೋಧಿ ಕಾಂಗ್ರೆಸ್ ಹಾಗೂ INDIA ಒಕ್ಕೂಟದ ವಿರುದ್ಧ ಇಂದು ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು. ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮೋಸದ ಕುರಿತು ಅವರು ವಿವರಿಸಿದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷಗಳು 5ನೇ ಬಾರಿ ಮಹಿಳಾ ಮೀಸಲಾತಿ ಮಸೂದೆಯನ್ನು ತಡೆದಿವೆ. ಮಸೂದೆ ಬಿದ್ದ ನಂತರ ಈ ಪಕ್ಷದವರು ಸಂತಸ ಸೂಚಿಸಿದ್ದಾರೆ ಎಂದು ಆಕ್ಷೇಪಿಸಿದರು.

ಈ ಮಸೂದೆಗೆ ಸಂಬಂಧಿಸಿದಂತೆ 2 ದಿನ ಚರ್ಚೆ ನಡೆದಿತ್ತು. 2023ರಲ್ಲಿ ವಿಪಕ್ಷಗಳು 2024ರ ಚುನಾವಣೆ ಕಾರಣಕ್ಕಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ್ದವು. ಮೊನ್ನೆ ಮಸೂದೆ ಮತಕ್ಕೆ ಹಾಕಿದಾಗ ಕಾಂಗ್ರೆಸ್ಸಿನವರು ಮಹಿಳೆಯರ ಹಿಂದಿನಿಂದ ಬಂದು ಚೂರಿಯಿಂದ ಇರಿಯುವ ಕೆಲಸ ಮಾಡಿದ್ದಾರೆ. ಈ ಪಕ್ಷಗಳು ದೇಶದ ಶೇ.50ರಷ್ಟಿರುವ ಮಹಿಳೆಯರಿಗೆ ದ್ರೋಹವೆಸಗಿದ್ದಾರೆ ಎಂದು ಟೀಕಿಸಿದರು.

‘ಇಂಡಿ’ ಒಕ್ಕೂಟದ ಪಕ್ಷಗಳ ಮಹಿಳಾ ವಿರೋಧಿ ಮಾನಸಿಕ ಸ್ಥಿತಿ ಅನಾವರಣಗೊಂಡಿದೆ. ಕುಟುಂಬ ಆಧಾರಿತ ಕೌಟುಂಬಿಕ ನಿರ್ವಹಣೆಯ ಪಕ್ಷಗಳು ದೆಹಲಿಯ ಮಹಿಳೆಯೇ ಆಗಿದ್ದರೂ ವಯನಾಡ್‍ನಿಂದ ಸ್ಪರ್ಧಿಸಲು ಅವಕಾಶ ಕೊಡುತ್ತವೆ. ಇತರ ಮಹಿಳೆಯರ ಸ್ಥಿತಿ ಹೀಗಿಲ್ಲ ಎಂದು ವಿವರಿಸಿದರು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯವು ಸಹಜ ಹಕ್ಕಾಗಿದೆ. ಈ ಹಕ್ಕು ನೀಡುವಲ್ಲಿ ವಿಳಂಬವಾಗಿದ್ದು, ಇದಕ್ಕೆ ಕಾಂಗ್ರೆಸ್ ಮತ್ತಿತರ ಪಕ್ಷಗಳೇ ಕಾರಣ ಎಂದು ದೂರಿದರು.

2011 ಜನಗಣತಿಯನ್ನು ಪರಿಗಣಿಸಿದರೆ ತಮಿಳುನಾಡಿನಲ್ಲಿ ಕೇವಲ 10 ಸೀಟು ಹೆಚ್ಚಾಗಬೇಕಿತ್ತು. ಆದರೆ ಅದು 59 ಆಗಲಿದೆ. ಕರ್ನಾಟಕದಲ್ಲೂ 28 ಇದ್ದುದು 42 ಆಗಲಿದೆ. ಮಹಿಳೆಯರು, ಎಸ್‍ಸಿ, ಎಸ್‍ಟಿಗಳ ಪ್ರಾತಿನಿಧ್ಯ ಹೆಚ್ಚಾಗಲಿದೆ. ರಾಜ್ಯಗಳ ಪ್ರಾತಿನಿಧ್ಯವೂ ಹೆಚ್ಚಾಗುತ್ತದೆ. ಈಗ ಕೆಲವು ಕ್ಷೇತ್ರಗಳು 39 ಲಕ್ಷದಷ್ಟು ಮತದಾರರನ್ನು ಹೊಂದಿವೆ. ಇನ್ನೂ ಕೆಲವು ಸುಮಾರು 2 ಲಕ್ಷ ಮತದಾರರನ್ನು ಹೊಂದಿವೆ ಎಂದು ವಿವರಿಸಿದರು.

ಜಾತಿ, ಮತದ ಆಧಾರದಲ್ಲಿ ಒಡೆಯಲು ಯತ್ನಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ಪ್ರಾದೇಶಿಕವಾಗಿ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು. ಕ್ಷೇತ್ರ ಪುನರ್ ವಿಂಗಡಣೆಯೂ ಅತ್ಯಂತ ಮಹತ್ವದ್ದು ಎಂದ ಅವರು, ಮಹಿಳಾ ಮೀಸಲಾತಿಗೆ ನಿರಂತರ ಪ್ರಯತ್ನ ನಡೆದಿತ್ತು. ಅಲ್ಲದೇ ಕಾಂಗ್ರೆಸ್ ಈ ವಿಚಾರದಲ್ಲಿ ಮಹಿಳೆಯರಿಗೆ ಮೋಸ ಮಾಡುತ್ತಲೇ ಬಂದಿದೆ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿ ಹೇರಿ ಕರಾಳ ಅಧ್ಯಾಯಕ್ಕೆ ಕಾರಣವಾದ ಹಾಗೂ ಸಂವಿಧಾನಕ್ಕೆ ತಿದ್ದುಪಡಿ ತಂದ ಕಾಂಗ್ರೆಸ್ ಪಕ್ಷದವರು ಇದೀಗ ಸಂವಿಧಾನದ ಬಗ್ಗೆ ಮಾಹಿತಿ ಕೊಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ದೇಶದ ಒಳಿತಿಗಾಗಿ ನಮ್ಮ ಸರಕಾರವು ಜಿಎಸ್‍ಟಿ ತಿದ್ದುಪಡಿ ತಂದಿದೆ. ನಾವು 370 ನೇ ವಿಧಿ ರದ್ದು ಮಾಡುವ ಸುಧಾರಣೆ ತಂದೆವು. ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆ ಕೊಡಲು ಮುಂದಾದೆವು. ಚುನಾವಣೆಗೆ ಆಗುವ ವೆಚ್ಚ ಕಡಿಮೆ ಮಾಡಲು ಒಂದು ದೇಶ, ಒಂದು ಚುನಾವಣೆಯನ್ನು ತರುವ ಉದ್ದೇಶವನ್ನು ತಿಳಿಸಿದೆವು. ನಾರಿ ಶಕ್ತಿ ಇನ್ನೂ 10 ವರ್ಷ ಕಾಯದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದಾಗಿತ್ತು ಎಂದು ತಿಳಿಸಿದರು.

ಮಹಿಳಾ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪ್ತಿ ರಾವತ್ ಭಾರದ್ವಾಜ್ ಅವರು ಮಾತನಾಡಿ, ನೀತಿ ನಿರೂಪಣೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ಆಶಯ ಪ್ರಧಾನಿ ನರೇಂದ್ರ ಮೋದಿಜೀ ಅವರದಾಗಿತ್ತು. ಆದರೆ, ವಿಪಕ್ಷಗಳು ಅದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಮತ್ತಿತರ ಪಕ್ಷಗಳು ಮಹಿಳೆಯರಿಗೆ ನಿರಂತರವಾಗಿ ದ್ರೋಹವೆಸಗಿವೆ ಎಂದು ತಿಳಿಸಿದರು.

ಸಮಾಜವಾದಿ ಪಕ್ಷವು ಮುಸ್ಲಿಂ ಮೀಸಲಾತಿಗೆ ಒತ್ತಾಯಿಸಿತ್ತು. ನಿಜವಾಗಿ ಈ ಎಲ್ಲ ಪಕ್ಷಗಳು ಮಹಿಳಾ ವಿರೋಧಿ ನೀತಿಯನ್ನು ಹೊಂದಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಲಕ್ಷಾಂತರ ಮಹಿಳೆಯರು ಪಂಚಾಯತ್‍ಗಳಲ್ಲಿ ಚುನಾಯಿತರಾಗಿದ್ದು, ಉತ್ತಮ ಆಡಳಿತ ನೀಡಿದ್ದಾರೆ ಎಂದು ಗಮನಕ್ಕೆ ತಂದರು.

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ರಾಜ್ಯ ವಕ್ತಾರೆ ಕು. ಸುರಭಿ ಹೊದಿಗೆರೆ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆನಂದ್ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ – ಕೊಲೆ ಶಂಕೆ

Spread the love ಬೆಂಗಳೂರು: ಭಾನುವಾರ ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ಮಣಿಪಾಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ