ಬೆಂಗಳೂರು, ಏ.27- ರಾಜ್ಯಾದ್ಯಂತ ಇರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ಎಲ್ಲಾ 14 ಜಿಲ್ಲಾ ಹಾಲು ಒಕ್ಕೂಟಗಳ 1500ಕ್ಕೂ ಹೆಚ್ಚು ನಂದಿನಿ ಮಳಿಗೆ, ಶಾಪಿ, ಪಾರ್ಲರ್, ಪ್ರಾಂಚೈಸಿಗಳ ಬಳಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಬರುವ ರೈತರಿಗೆ ಕೆಎಂಎಫ್ ಹಾಗೂ ಒಕ್ಕೂಟಗಳ ವತಿಯಿಂದ ಉಚಿತವಾಗಿ ದಿನವಹಿ, ಕುಡಿಯುವ ನೀರು, ಮಜ್ಜಿಗೆ, ಸ್ಯಾನಿಟೈಜರ್, ಕೈಗವಚು ಮತ್ತು ಮಾಸ್ಕ್ ಗಳನ್ನು ಒದಗಿಸಲಾಗುವುದು.
ರೈತರು ಸ್ವಚ್ಚತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರಾಟ ಮಾಡಬೇಕು ಎಂದು ತೋಟಗಾರಿಕೆ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕ ಮಹಾಂತೇಶ್ ಮುರುಗೋಡ್ ತಿಳಿಸಿದ್ದಾರೆ.
ಕೊರೋನಾ ವೈರಾಣು ಸೋಂಕು ತಡೆಯಲು ಲಾಕ್ ಡೌನ್ ಜಾರಿಯಿರುವುದರಿಂದ ರೈತರು ಬೆಳೆದ ಹಣ್ಣು, ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಹಣ್ಣು, ತರಕಾರಿಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಕೆಎಂಎಫ್ ಬೆಂಗಳೂರು ಹಾಗೂ ಇತರೆ ಜಿಲ್ಲಾ ಕೇಂದ್ರಗಳ ಮಾರಾಟ ಮಳಿಗೆಗಳಲ್ಲಿ ರೈತರು ನೇರವಾಗಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದರೆ ಉತ್ತಮ ಬೆಲೆ ದೊರಕುತ್ತದೆ. ಆದ್ದರಿಂದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ನೀಡುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿತ್ತುಅದರಂತೆ ಕೆಎಂಎಫ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ಜರುಗಿದ ಸಭೆಯಲ್ಲಿ ಕೋವಿಡ್-19ರ ತುರ್ತು ಪರಿಸ್ಥಿತಿಯಲ್ಲಿ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ನಂದಿನಿ ಮಳಿಗೆ ಬಳಿ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.