ನವದೆಹಲಿ: ವಿಶ್ವಾದ್ಯಂತ ಕಣ್ಣಿಗೆ ಕಾಣದ ಶತ್ರುವಿನಂತೆ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕಿನ ವಿರುದ್ಧ ನಾವು ಯಶಸ್ವಿಯಾಗಿ ಹೋರಾಡಿ ಜಯಗಳಿಸಲಿದ್ದೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜೀವ್ ಗಾಂದಿ ಆರೋಗ್ಯ ವಿವಿಯ ಬೆಳ್ಳಿ ಮಹೋತ್ಸವ ಆಚರಣೆ ಸಮಾರಂಭವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ವಿರುದ್ಧದ ಯುದ್ಧದಲ್ಲಿ ನಾವು ಜಯಗಳಿಸುತ್ತೇವೆ. ವೈದ್ಯರು, ನರ್ಸ್, ಪೊಲೀಸರು ಸೇರಿದಂತೆ ಎಲ್ಲಾ ಕೊರೊನ ವಾರಿಯರ್ಸ್ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುವ ದಾಳಿಗಳನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ ಎಂದರು.
ಎರಡು ವಿಶ್ವ ಯುದ್ಧಗಳ ನಂತರದ ಇದೀ ಇಡೀ ಪ್ರಪಂಚವೇ ಕೊರೋನಾ ಎಂಬ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ. ಕೊರೋನಾ ವೈರಸ್ ಎಂಬುದು ಜಾಗತಿಕ ಯುದ್ಧ ಇದ್ದಂತೆಯೇ, ವೈದ್ಯಕೀಯ ಸಿಬ್ಬಂದಿ ಈ ಯುದ್ಧದಲ್ಲಿ ಸೈನಿಕರಂತೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ಕೊರೋನಾ ವಾರಿಯರ್ಸ್’ಗೆ ರೂ.50 ಲಕ್ಷ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಇಡೀ ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಯೋಜನೆಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 1 ಕೋಟಿಗೂ ಅಧಿಕ ಜನ ಈ ಯೋಜನೆಯ ಲಾಭ ಪಡೆದಿರುವುದು ಅತ್ಯಂತ ಸಂತಸದ ಸಂಗತಿ. ಕಳೆದ ಐದು ವರ್ಷಗಳಲ್ಲಿ 22 ಹೊಸ AIMS ಆಸ್ಪತ್ರೆಗಳನ್ನು ನಿರ್ಮಿಸಲಾಗಿದ್ದು, MBBSನಲ್ಲಿ ಒಟ್ಟು 30,000 ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
https://youtu.be/OYEMtBeW6b0
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಶುರು ಮಾಡಿರುವ ಆರೋಗ್ಯ ಸೇತು ಆ್ಯಪ್ ವಿಶ್ವದಲ್ಲಿಯೇ ಮಹತ್ವದ ಪ್ರಯೋಗವಾಗಿದ್ದು, ಈಗಾಗಲೇ 12 ಕೋಟಿ ಜನರು ಇದನ್ನು ಡೌನ್’ಲೋಡ್ ಮಾಡಿಕೊಂಡಿದ್ದಾರೆ. ಇನ್ನು ಸ್ವದೇಶಿ ಚಳವಳಿ ನಿಟ್ಟಿನಲ್ಲಿ ಪಿಪಿಇ ಕಿಟ್ ಸೇರಿದಂತೆ ಅನೇಕ ವೈದ್ಯಕೀಯ ಸಲಕರಣೆಯನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿ ರೂಪಿಸಲಾಗಿದೆ ಎಂದು ಹೇಳಿದರು.