ಮೈಸೂರು: ಪತ್ನಿ ಜೀವಂತವಾಗಿದ್ದರೂ ಆಕೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ಆದಿವಾಸಿ ಸುರೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ. ಕುಶಾಲನಗರ ಸರ್ಕಲ್ ಇನ್ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಇಲವಾಲ ಇನ್ಸ್ಪೆಕ್ಟರ್ ಮಹೇಶ್ ಕುಮಾರ್ ಹಾಗೂ ಜಯಪುರ ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್ ಎತ್ತಿನಮನೆ ಅಮಾನತಾದವರು.
ಏನಿದು ಪ್ರಕರಣ?: ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಸುರೇಶ್ ಅಲಿಯಾಸ್ ಕುರುಬರ ಸುರೇಶ್ ಎಂಬವರ ವಿರುದ್ಧ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಅಂದಿನ ಬೈಲಕುಪ್ಪೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ತನಿಖಾಧಿಕಾರಿಯೂ ಆಗಿದ್ದ ಬಿ.ಜಿ.ಪ್ರಕಾಶ್ ಸುಳ್ಳು ಪ್ರಕರಣ ಸೃಷ್ಟಿಸಿ, ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖಾ ತಂಡದಲ್ಲಿ ಬೆಟ್ಟದಪುರದ ಪ್ರೊಬೆಷನರಿ ಪಿಎಸ್‌ಐ ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಯತ್ತಿಮನಿ ಕೂಡ ಇದ್ದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಅಮಾಯಕನ ಮೇಲೆ ಸುಳ್ಳು ಚಾರ್ಜ್‌ಶೀಟ್ ಹಾಕಿ ಜೈಲಿಗೆ ಕಳುಹಿಸಿದ್ದರು.
ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 9 ಮಂದಿ ಸಾಕ್ಷಿಗಳ ವಿಚಾರಣೆ ಆಗಿತ್ತು.
“ನಾನು ನನ್ನ ಪತ್ನಿಯನ್ನು ಕೊಂದಿಲ್ಲ. ಆಕೆ ಬದುಕಿದ್ದಾಳೆ” ಎಂದು ಸುರೇಶ್ ಪದೇ ಪದೆ ನ್ಯಾಯಾಲಯದಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ ನಮ್ಮ ತಾಯಿ ಬದುಕಿದ್ದಾಳೆ, ಸತ್ತಿಲ್ಲ ಎಂದು ಆಕೆಯ ಮಕ್ಕಳು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಲ್ಲದೇ ಆಕೆ ಸತ್ತಿಲ್ಲ ಎಂದು ಅಕ್ಕಪಕ್ಕದ ಮನೆಯವರೂ ಸಾಕ್ಷ್ಯ ಹೇಳಿದ್ದರು
Laxmi News 24×7