Breaking News

ಲಾಕ್‌ಡೌನ್‌ ಪರಿಣಾಮ: ಹೊಲದಲ್ಲೇ ಉಳಿದ ಹಣ್ಣು, ತರಕಾರಿ

Spread the love

ಹುಬ್ಬಳ್ಳಿ: ಲಾಕ್‌ಡೌನ್ ಪರಿಣಾಮ ಕೃಷಿ ಉತ್ಪನ್ನಗಳ ಮಾರಾಟದ ಮೇಲೂ ಆಗಿದೆ. ಮಾರುಕಟ್ಟೆ ಕೊರತೆ, ಬೇಡಿಕೆ ಕುಸಿತದ ಕಾರಣ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೆಲವರು ಬೆಳೆಗಳನ್ನು ಹೊಲದಲ್ಲಿಯೇ ಬಿಟ್ಟಿದ್ದರೆ, ಇನ್ನು ಹಲವರು ನಾಶ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ತೆಲಸಂಗ ಭಾಗದಲ್ಲಿ ರೈತರು ಕಲ್ಲಂಗಡಿ ಹಣ್ಣುಗಳನ್ನು ಗಿಡದಲ್ಲೇ‌ ಬಿಟ್ಟಿದ್ದರು. ಕಣಬರ್ಗಿಯಲ್ಲಿ ರೈತರೊಬ್ಬರು ಕೊತ್ತಂಬರಿ ಸೊಪ್ಪು, ಖಾನಾಪುರ ತಾಲ್ಲೂಕಿನ ಪಾರಿಶ್ವಾಡದ ಹೂಕೋಸು, ಮೂಡಲಗಿ ತಾಲ್ಲೂಕಿನ ಹಳ್ಳೂರದಲ್ಲಿ ಮೆಣಸಿನಕಾಯಿ ಬೆಳೆಯನ್ನು ಹಾಗೇ ಹೊಲದಲ್ಲಿ ಬಿಟ್ಟಿದ್ದರು. ಅಲ್ಲಲ್ಲಿ ಕೆಲವರು ಹೂವುಗಳನ್ನು ನಾಶಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಗಾರರು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿಯಲ್ಲಿ 60 ಹೆಕ್ಟೇರ್ ಪ್ರದೇಶದ ಬೆಳೆಯನ್ನು ರೈತರು ನಾಶಮಾಡಿದ್ದಾರೆ. ಹೊಲದಲ್ಲೇ ಕಟಾವು ಮಾಡಿ ಮೇಯಲು ಜಾನುವಾರು ಬಿಟ್ಟಿದ್ದಾರೆ.

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕುರ್ಲಗೇರಿಯ ರೈತರು ಬೆಳೆದಿದ್ದ ಪೇರಲ ಹಣ್ಣು ತೋಟೆಲ್ಲಿಯೇ ಕೊಳೆಯುತ್ತಿವೆ. ಹಾವೇರಿ ಜಿಲ್ಲೆಯ ನಾಗನೂರ, ಗಣಜೂರು, ಕರ್ಜಗಿ ಸೇರಿದಂತೆ ಹಲವು ಕಡೆ ಮಾರುಕಟ್ಟೆ ಸಿಗದೇ ಹೂವುಗಳನ್ನು ಹೊಲದಲ್ಲಿಯೇ ಬಿಡಲಾಗಿದೆ.

ಹಾವೇರಿ ತಾಲ್ಲೂಕು ಕೋಳೂರು ಸುತ್ತಮುತ್ತ ನೂರಾರು ಎಕರೆಯಲ್ಲಿ ಪೇರಲಬೆಳೆ ಉದುರುತ್ತಿವೆ. ‘ಎರಡೂವರೆ ಎಕರೆಯಲ್ಲಿ ಪೇರಲ ಬೆಳೆದಿದ್ದೆ. ಮಾರುಕಟ್ಟೆಯಿಲ್ಲದೇ ₹1.5 ಲಕ್ಷ ನಷ್ಟವಾಗಿದೆ’ ಎಂದು ಕೋಳೂರಿನ ರೈತ ಸತೀಶ ಸಮಸ್ಯೆ ತೋಡಿಕೊಂಡರು.

ರೈತ ಕಂಗಾಲು (ಕಲಬುರ್ಗಿ ವರದಿ): ಕಲಬುರ್ಗಿ ಜಿಲ್ಲೆಯಲ್ಲಿ ಈ ವರ್ಷ ಒಟ್ಟು 480 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಲಾಕ್‌ಡೌನ್‌ನಿಂದಾಗಿ ಸೂಕ್ತ ಮಾರುಕಟ್ಟೆ ಸಿಗದೇ ಹಣ್ಣು, ತರಕಾರಿ ರೈತರ ಹೊಲದಲ್ಲೇ ಉಳಿದಿದೆ.

ಬೇಸಿಗೆ ಆರಂಭದಲ್ಲಿ ಕೆಜಿಗೆ ₹ 10 ದರ ಇತ್ತು. ಈಗ ದರ ಗಣನೀಯವಾಗಿ ಕುಸಿದಿದ್ದು, ಆಳಂದ ಹಾಗೂ ಅಫಜಲ‍ಪುರ ತಾಲ್ಲೂಕಿನಲ್ಲಿ ಹಲವು ರೈತರು ತಾವು ಬೆಳೆದ ಕಲ್ಲಂಗಡಿ ಹಾಗೂ ತರಕಾರಿಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಕೆಲವರು ದನಗಳಿಗೆ ತಿನ್ನಿಸುತ್ತಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ 800 ಹೆಕ್ಟೇರ್‌ನಲ್ಲಿ ಕಲ್ಲಂಗಡಿ ಬೆಳೆದಿದ್ದು, ರೈತರಿಗೆ ಲಾಕ್‌ಡೌನ್‌ ಅವಧಿಯಲ್ಲಿ ಶೇ 30ರಷ್ಟು ನಷ್ಟವಾಗಿದೆ. ‘ಕೋವಿಡ್‌ ಸಂದರ್ಭದಲ್ಲಿ ಕಲ್ಲಂಗಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ತಪ್ಪುಕಲ್ಪನೆಯೂ ಬೆಲೆ ಕುಸಿತಕ್ಕೆ ಕಾರಣ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಮಾವು, ಕಲ್ಲಂಗಡಿ, ಕರಬೂಜ ಕೆಲವೆಡೆ ರೈತರ ಬಳಿಯೇ ಕೊಳೆತುಹೋಗಿವೆ. ಕೆಲ ರೈತರು ಬದನೆಕಾಯಿ, ಟೊಮ್ಯಾಟೊ ಬೆಳೆಗಳನ್ನು ದನಕ್ಕೆ ಹಾಕಿದ್ದಾರೆ. ಸುಗಂಧ ರಾಜ ಮತ್ತಿತರ ಹೂ ಬೆಳೆ ನಾಶಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಬೆಳೆದ ಕಲ್ಲಂಗಡಿಯೂ ಮಾರಾಟವಾಗುತ್ತಿಲ್ಲ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ