ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ಹಾಗೂ ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ʻಧರ್ಮನ್ʼ ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ಶ್ರೀಲೀಲಾ (Sreeleela) ಪ್ರಮುಖ ಪಾತ್ರಕ್ಕಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಪ್ರಕಟಿಸಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ.
ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಹಾಗೂ ಟರ್ಮರಿಕ್ ಮೀಡಿಯಾ ಬ್ಯಾನರ್ಗಳ ಅಡಿಯಲ್ಲಿ ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಈ ಬಿಗ್ ಬಜೆಟ್ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ʻಓ ಮೈ ಕಡವುಳೆʼ ಖ್ಯಾತಿಯ ಅಶ್ವತ್ಥ್ ಮಾರಿಮುತ್ತು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಹೊಸ ಬಗೆಯ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಇದೀಗ ಶ್ರೀಲೀಲಾ ಅವರ ಆಗಮನದಿಂದ ಚಿತ್ರದ ಮೆರುಗು ಮತ್ತಷ್ಟು ಹೆಚ್ಚಿದೆ.
ಈ ಚಿತ್ರಕ್ಕೆ ತಾಂತ್ರಿಕವಾಗಿಯೂ ಪ್ರಬಲ ತಂಡ ಸಾಥ್ ನೀಡಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇನ್ನು ಅದ್ದೂರಿ ಸಾಹಸ ದೃಶ್ಯಗಳಿಗಾಗಿ ಜನಪ್ರಿಯ ಸಾಹಸ ನಿರ್ದೇಶಕರಾದ ಅನ್ಬರಿವ್ ಜೋಡಿ ಕೈಜೋಡಿಸಿದೆ. ಅತ್ಯುನ್ನತ ತಾಂತ್ರಿಕ ಗುಣಮಟ್ಟ ಮತ್ತು ಬಲಿಷ್ಠ ತಾರಾಗಣದೊಂದಿಗೆ ಸಿದ್ಧವಾಗುತ್ತಿರುವ ʻಧರ್ಮನ್ʼ ಸಿನಿಮಾ ಬೆಳ್ಳಿತೆರೆಯಲ್ಲಿ ಹೊಸದೊಂದು ಮ್ಯಾಜಿಕ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ. ಈ ಚಿತ್ರಕ್ಕೆ ಈಚೆಗಷ್ಟೆ ನಯನತಾರಾ ಎಂಟ್ರಿ ಕೊಟ್ಟಿದ್ದರು.
Laxmi News 24×7