Breaking News

ಸೌದಿ ವಿಮಾನ ನಿಲ್ದಾಣದ ಮೇಲೆ ಮತ್ತೆ ಹೌತಿ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ದುರ್ಮರಣ

Spread the love

ರಿಯಾದ್/ಹೈದರಾಬಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಹೈದರಾಬಾದ್‌ನ ಮೆಹದಿಪಟ್ನಂ ನಿವಾಸಿಯಾದ ಮೊಹಮ್ಮದ್ ಯೂಸುಫ್ ಅಲಿ ಶನಿವಾರ (ಅ. 10) ನಡೆದ ಮೊದಲ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಓರ್ವ ಪುತ್ರನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಮತ್ತೋರ್ವ ಪುತ್ರನ ಕಾಲಿನ ಮೂರು ಬೆರಳುಗಳು ಕತ್ತರಿಸಿಹೋಗಿವೆ. ಯೂಸುಫ್ ಅವರ ಪತ್ನಿ ಮತ್ತು ಪುತ್ರಿ ಸುರಕ್ಷಿತವಾಗಿದ್ದು, ಜೊತೆಯಲ್ಲಿದ್ದ ಚಿಕ್ಕಮ್ಮನ ತಲೆಗೆ ಪೆಟ್ಟಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಐಎಂಐಎಂ  ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಹೈದರಾಬಾದಿನ ಮೊಹಮ್ಮದ್ ಯೂಸುಫ್ ಅಲಿ ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಇಬ್ಬರು ಪುತ್ರರೂ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ರಿಯಾದ್‌ನಲ್ಲಿರುವ ಯೂಸುಫ್ ಅವರ ಸಂಬಂಧಿಕರು ಹಾಗೂ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್  ಅವರೊಂದಿಗೆ ಮಾತನಾಡಿದ್ದೇನೆ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ಕಲ್ಪಿಸಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡುತ್ತೇನೆ ಎಂದು ಓವೈಸಿ ಎಕ್ಸ್‌ನಲ್ಲಿ ಹೇಳಿದ್ದಾರೆ.

ಭಾರತೀಯ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ, ಗಾಯಗೊಂಡಿರುವ ಮೂವರು ಭಾರತೀಯರು ತೀವ್ರ ನಿಗಾ ಘಟಕದಲ್ಲಿದ್ದು  ಚೇತರಿಸಿಕೊಳ್ಳುತ್ತಿದ್ದಾರೆ. ಇಬ್ಬರು ಸಾಮಾನ್ಯ ವಾರ್ಡ್‌ನಲ್ಲಿದ್ದು, ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ.

 

ಸತತ ಎರಡನೇ ದಿನ ದಾಳಿ
ರಿಯಾದ್ ವಿಮಾನ ನಿಲ್ದಾಣದ ಮೇಲೆ ಸತತ ಎರಡು ದಿನಗಳಲ್ಲಿ ಎರಡು ಕ್ಷಿಪಣಿ ದಾಳಿಗಳು ನಡೆದಿವೆ. ಶನಿವಾರ ನಡೆದ ಮೊದಲ ದಾಳಿಯಲ್ಲಿ ಯೂಸುಫ್ ಅಲಿ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ ನಾಲ್ವರು ಸೌದಿ ಪ್ರಜೆಗಳು ಹಾಗೂ ಬಾಂಗ್ಲಾದೇಶ, ಪ್ಯಾಲೆಸ್ತೀನ್, ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ ಮತ್ತು ಸುಡಾನ್ ದೇಶಗಳ ಪ್ರಜೆಗಳಿದ್ದಾರೆ.ಭಾನುವಾರ ವಿಮಾನ ನಿಲ್ದಾಣದ ಮೇಲೆ ಮತ್ತೆ ನಡೆದ ದಾಳಿಯಲ್ಲಿ ಪಾಕಿಸ್ತಾನ ಮೂಲದ ನಿವಾಸಿ ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ.

ಈ ಎರಡೂ ದಾಳಿಗಳ ಹೊಣೆಯನ್ನು ಯೆಮೆನ್‌ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಯೆಮೆನ್ ಅಂತರ್ಯುದ್ಧದಲ್ಲಿ ಸೌದಿ ಅರೇಬಿಯಾ ಸರ್ಕಾರಿ ಪಡೆಗಳಿಗೆ ಬೆಂಬಲ ನೀಡುತ್ತಿರುವುದಕ್ಕೆ ಹಾಗೂ ಸನಾದಲ್ಲಿನ ವಿಮಾನ ನಿಲ್ದಾಣದ ಮೇಲಿನ ವೈಮಾನಿಕ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಹಾಗೂ ವಾಯುಪ್ರದೇಶವನ್ನು ಬಳಸದಂತೆ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪ – ಖಂಡ್ರೆ ಸಹೋದರನಿಗೆ ಹೈಕೋರ್ಟ್‌ ನೋಟಿಸ್‌

Spread the loveಬೀದರ್: ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ  ಸಹೋದರ ಅಮರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ