ಬಾಗಲಕೋಟೆ: ನೈತಿಕ ಮೌಲ್ಯಗಳು ಹಾಗೂ ಮಾನವೀಯ ಗುಣಗಳು ಮನುಷ್ಯನ ಜೀವನದ ಆಧಾರಸ್ತಂಭಗಳಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸತ್ಯ, ಪ್ರಾಮಾಣಿಕತೆ, ಸಹಾನುಭೂತಿ, ಸೇವಾ ಮನೋಭಾವ ಹಾಗೂ ಪರಸ್ಪರ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಕಲ್ಮಠ, ಬೀಳಗಿಯ ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯರು ಹೇಳಿದರು.
ಬಿ.ವ್ಹಿ.ವ್ಹಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ ಸಾಂಸ್ಕೃತಿಕ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮ.ನಿ.ಪ್ರ. ಬೀಳೂರು ಗುರುಬಸವ ಮಹಾಸ್ವಾಮಿಗಳ ಸಂಸ್ಮರಣಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ, ‘ನೈತಿಕ ಮೌಲ್ಯಗಳು ಹಾಗೂ ಮಾನವೀಯತೆ’ ವಿಷಯ ಕುರಿತು ಅವರು ಮಾತನಾಡಿದರು.
ಬೀಳೂರು ಶ್ರೀ ಗುರುಬಸವ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಪಾಲಕರು ಹಾಗೂ ಶಿಕ್ಷಕರಿಗೆ ಸದಾ ಕೃತಜ್ಞರಾಗಿರಬೇಕು. ಜೀವನದಲ್ಲಿ ಸ್ಪಷ್ಟವಾದ ಗುರಿ ಹೊಂದಿ, ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಬೇಕು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯತೆಯೊಂದಿಗೆ ಬದುಕಿದಾಗ ವ್ಯಕ್ತಿತ್ವ ವಿಕಸನದ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಬೀಳೂರು ಮಹಾಸ್ವಾಮಿಗಳ ಉತ್ಸವ ಸಮಿತಿ ಅಧ್ಯಕ್ಷರಾದ ಬಿ.ಆರ್. ಬೋಳಿಶೆಟ್ಟಿ ಅವರು, ಬೀಳೂರು ಶ್ರೀ ಗುರುಬಸವ ಮಹಾಸ್ವಾಮಿಗಳ ಜೀವನ, ಸಮಾಜಕ್ಕೆ ಅವರು ನೀಡಿದ ಕೊಡುಗೆ ಹಾಗೂ ಅವರ ಆದರ್ಶಗಳ ಕುರಿತು ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎಸ್.ಜೆ. ಒಡೆಯರ ಅಧ್ಯಕ್ಷತೆ ವಹಿಸಿ, ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಐ. ನಂದಿಕೋಲಮಠ ಅತಿಥಿಗಳನ್ನು ಪರಿಚಯಿಸಿದರು. ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಪಿ.ಕೆ. ಚೌಗುಲಾ ಉಪಸ್ಥಿತರಿದ್ದರು.
Laxmi News 24×7