ಚಿಕ್ಕಮಗಳೂರು: ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡಿದೆ. ಚಿರತೆ ಓಡಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಫೋಟೋ ಒಂದರಲ್ಲಿ ವೃದ್ಧೆಯೊಬ್ಬಳು ಮನೆಯಂಗಳದಲ್ಲಿ ನಿಂತಿದ್ದಾಗ, ಬಹಳ ಸಮೀಪದಲ್ಲೇ ಚಿರತೆ ಹೋಗಿರುವುದು ಸೆರೆಯಾಗಿದೆ. ಚಿರತೆ ಮನೆಯೊಂದರ ಕಾಂಪೌಂಡ್ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಹ ಮೊಬೈಲ್‌ನಲ್ಲಿ ಗ್ರಾಮಸ್ಥರು ಸೆರೆಹಿಡಿದಿದ್ದಾರೆ. ಚಿರತೆಯ ಓಡಾಟದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಚಿರತೆ ಓಡಾಟದಿಂದ ಕೂಲಿ ಕಾರ್ಮಿಕರು, ಬೈಕ್ ಸವಾರರು, ಶಾಲಾ ಮಕ್ಕಳ ಓಡಾಟಕ್ಕೆ ಭಯಪಡುವಂತಾಗಿದೆ. ಕೂಡಲೇ ಚಿರತೆಯನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನೂ ಚಿರತೆ ಓಡಾಡುತ್ತಿರುವುದರಿಂದ ಜನ ಅನಗತ್ಯವಾಗಿ ಗ್ರಾಮದಲ್ಲಿ ಓಡಾಡದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಚಿರತೆ ಸೆರೆ ಹಿಡಿಯಲು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮದ್ಯಪಾನ ಮಾಡಿ ಚಿರತೆ ಸೆರೆ ಹಿಡಿಯಲು ಬಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.
Laxmi News 24×7