ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ಆಕರ್ಷಕ ‘ಧನಲಕ್ಷ್ಮಿ’ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ದೇವಾಲಯದ ಗರ್ಭಗುಡಿಯನ್ನು ಸಂಪೂರ್ಣವಾಗಿ ನೋಟುಗಳಿಂದ ಸಿಂಗರಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಭಕ್ತರು ನೀಡಿದ ಕಾಣಿಕೆ ಹಣವಾದ ಸುಮಾರು 3 ಲಕ್ಷ ರೂ. ಬಳಸಿಕೊಂಡು ದೇವಾಲಯದ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಅವರು ಈ ವೈಭವೋಪೇತ ಅಲಂಕಾರ ಮಾಡಿದ್ದಾರೆ.

10, 20, 50, 100, 200 ಹಾಗೂ 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಜೋಡಿಸಿ ಗರ್ಭಗುಡಿ ಮತ್ತು ದೇವಿಯ ಸುತ್ತಲೂ ಕಲಾತ್ಮಕವಾಗಿ ಅಲಂಕರಿಸಲಾಗಿದೆ. ನಾಡಿನಲ್ಲಿ ಕಾಲಕಾಲಕ್ಕೆ ಉತ್ತಮ ಮಳೆ-ಬೆಳೆಯಾಗಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಸಮೃದ್ಧಿ ಸಿಗಲಿ ಎಂದು ಸಂಕಲ್ಪಿಸಿ ದೇವಿಗೆ ವಿಶೇಷ ಅರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.
ಧನಲಕ್ಷ್ಮಿ ರೂಪದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬೆಳಗಿನಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
Laxmi News 24×7