Breaking News

ದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾ

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ  ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ.

ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಅನುಮತಿ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಎಂ. ಸಾಂಬ್ರಾಣಿ ಅವರು ವಜಾಗೊಳಿಸಿದ್ದಾರೆ. ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ (VC) ಮೂಲಕವೇ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.

ವಿಡಿಯೋ ಕಾನ್ಫರೆನ್ಸ್ಮೂಲಕ ವಿಚಾರಣೆ ನಡೆದರೆ ಆಡಿಯೋ ಹಾಗೂ ವಿಡಿಯೋ ಗುಣಮಟ್ಟದ ಸಮಸ್ಯೆ ಎದುರಾಗಬಹುದು.ಇದರಿಂದ ಸಾಕ್ಷಿಗಳ ಪಾಟಿಸವಾಲು ನಡೆಸಲು ಅಡ್ಡಿಯಾಗಲಿದ್ದು, ಆರೋಪಿಯ ಪರ ವಾದ ಮಂಡನೆಗೆ ತೊಂದರೆಯಾಗುತ್ತದೆ. ಹೀಗಾಗಿ ಖುದ್ದು ಹಾಜರಾತಿಗೆ ಅವಕಾಶ ನೀಡಬೇಕು ಎಂದು ದರ್ಶನ್‌ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದ್ದರು.

ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್, ದರ್ಶನ್ ಕೋರ್ಟ್‌ಗೆ ಖುದ್ದು ಹಾಜರಾದರೆ ಅಪಾರ ಸಂಖ್ಯೆಯಲ್ಲಿ ಜನ ಮತ್ತು ಅಭಿಮಾನಿಗಳು ಜಮಾಯಿಸುವ ಸಾಧ್ಯತೆ ಇದೆ.ಇದರಿಂದ ನ್ಯಾಯಾಲಯದ ಆವರಣದಲ್ಲಿ ಜನದಟ್ಟಣೆ ಹೆಚ್ಚಾಗಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗುವುದರ ಜತೆಗೆ ಭದ್ರತಾ ಸಮಸ್ಯೆ ಎದುರಾಗುತ್ತದೆ. ಪೊಲೀಸರು ದಿನವಿಡೀ ಬಿಗಿ ಬಂದೋಬಸ್ತ್ ಮಾಡಬೇಕಾಗುತ್ತದೆ.ವಿಡಿಯೋ ಕಾನ್ಫರೆನ್ಸ್ ಮೂಲಕ ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ವಿಚಾರಣೆ ನಡೆಸಬಹುದು ಎಂದು ಪ್ರತಿವಾದ ಮಂಡಿಸಿದ್ದರು.

ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ ನ್ಯಾಯಾಧೀಶರು ಕೆಲವು ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ಜೈಲಿನಲ್ಲಿ ನಡೆಯುವ ವಿಡಿಯೋ ಕಾನ್ಫರೆನ್ಸ್ ವೇಳೆ ಆಡಿಯೋ ಮತ್ತು ವಿಡಿಯೋ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಜೈಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಈ ತಾಂತ್ರಿಕ ಸೌಲಭ್ಯಗಳ ಮೇಲ್ವಿಚಾರಣೆಯನ್ನು ಕೋರ್ಟ್ ರಿಜಿಸ್ಟ್ರಾರ್ ಸೂಕ್ತವಾಗಿ ನಿರ್ವಹಿಸಬೇಕು. ವಿಚಾರಣೆಯ ಸಂದರ್ಭದಲ್ಲಿ ನಟ ದರ್ಶನ್ ತಮ್ಮ ವಕೀಲರೊಂದಿಗೆ ಪ್ರತ್ಯೇಕವಾಗಿ ಹಾಗೂ ಗೌಪ್ಯವಾಗಿ ಸಮಾಲೋಚನೆ ನಡೆಸಲು ಜೈಲಿನಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು ಆದೇಶಿಸಿದರು.

ಕಳೆದ ವಾರವಷ್ಟೇ ಸಹ-ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬಾರದು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ವಿಚಾರಣೆ ವೇಳೆಯಾದರೂ ಕೋರ್ಟ್‌ಗೆ ನೇರವಾಗಿ ಹಾಜರಾಗಬಹುದೆಂಬ ದರ್ಶನ್ ನಿರೀಕ್ಷೆಗೆ ಮತ್ತೊಮ್ಮೆ ನಿರಾಸೆಯಾಗಿದ್ದು, ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಬೇಕಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ