ಮಂಗಳೂರು: ಬಂಟ್ವಾಳದ ನರಿಕೊಂಬು ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಸಿಲುಕಿದ ಸಿಬ್ಬಂದಿಯನ್ನು ಶಾಲಾ ಬಾಲಕನೊಬ್ಬ ರಕ್ಷಿಸಿದ್ದಾನೆ. ಬಾಲಕನ ಸಾಹಸಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಎಕ್ಸ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಡುಗೆ ಸಿಬ್ಬಂದಿ ಪೂರ್ಣಿಮಾ ಅವರು ಕೆಲಸ ಮಾಡುತ್ತಿದ್ದಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಕೈ ಸಿಲುಕಿದೆ. ಈ ವೇಳೆ ಅವರು ನೋವಿನಿಂದ ಜೋರಾಗಿ ಕಿರುಚಿಕೊಂಡಿದ್ದಾರೆ. ಆಗ ಅಲ್ಲೇ ಆಟ ಆಡುತ್ತಿದ್ದ ಐದನೇ ತರಗತಿ ಬಾಲಕ ಮನ್ವಿತ್ ಕೂಡಲೇ ವಿದ್ಯುತ್ ಸ್ವಿಚ್ನ್ನು ಆಫ್ ಮಾಡಿದ್ದಾನೆ.
ಸಿಎಂ ಪೋಸ್ಟ್ನಲ್ಲಿ ಏನಿದೆ?
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ನ ಸಮಯಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಮತ್ತು ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಿದ ಮನ್ವಿತ್ಗೆ ಹೃದಯಪೂರ್ವಕ ಅಭಿನಂದನೆಗಳು.
ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡು ಅವರು ನೋವಿನಿಂದ ಕಿರುಚುತ್ತಿದ್ದಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ ಮನ್ವಿತ್ ತಕ್ಷಣ ವಿದ್ಯುತ್ ಸ್ವಿಚ್ ಆಫ್ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾನೆ.
ಬಾಲಕನ ಒಂದು ಕ್ಷಣದ ಜಾಗರೂಕತೆ, ಸರಿಯಾದ ನಿರ್ಧಾರವೊಂದು ಅಡುಗೆ ಸಿಬ್ಬಂದಿಯ ಕೈಬೆರಳನ್ನು ಉಳಿಸಿದೆ. ಮನ್ವಿತ್ನ ಈ ಮಾನವೀಯ ಕಾಳಜಿ, ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ. ಬಾಲಕನ ಮುಂದಿನ ಭವಿಷ್ಯ ಉಜ್ವಲವಾಗಲಿ, ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು ಸಿಎರಂ ಹಾರೈಸಿದ್ದಾರೆ.
Laxmi News 24×7