Breaking News

ಹೈಕೋರ್ಟ್‌ನಲ್ಲೂ ದರ್ಶನ್‌ಗೆ ಹಿನ್ನಡೆ – ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದ ಕೋರ್ಟ್‌

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ.

ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ 14ನೇ ಆರೋಪಿ ಪ್ರದೋಷ್ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್  ತಿರಸ್ಕರಿಸಿದೆ. 59ನೇ ಸಿಸಿಹೆಚ್‌ ನ್ಯಾಯಾಲಯ ನೀಡಿದ್ದ ಆದೇಶವನ್ನೇ ಎತ್ತಿಹಿಡಿದಿದೆ.

ಸೆಷನ್ಸ್ ಕೋರ್ಟ್, ಮಾಫಿ ಸಾಕ್ಷಿ ಅರ್ಜಿ ವಿಚಾರಣೆಯಲ್ಲಿ ಇತರೆ ಆರೋಪಿಗಳ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ದರ್ಶನ್ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಕೋರ್ಟ್‌ ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ, ದರ್ಶನ್ ಆಕ್ಷೇಪಣೆ ಸಲ್ಲಿಸುವಂತಿಲ್ಲ. ನಿಮ್ಮ ವಾದವನ್ನ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿತು.

ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿಂದು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಮುನ್ನ ಆರೋಪಿಗಳ ವಾದವನ್ನ ಆಲಿಸಬೇಕು ಎಂದು ವಾದಿಸಿದರು. ಆದರೆ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು, ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ವೇಳೆ ಇತರೆ ಆರೋಪಿಗಳಿಗೆ ಆಕ್ಷೇಪಣೆ ಸಲ್ಲಿಸುವ ಅವಕಾಶವಿಲ್ಲ. ಪ್ರಕ್ರಿಯೆಯಲ್ಲಿ ಲೋಪವಾದಲ್ಲಿ ಮಾತ್ರ ಆರೋಪಿಗಳು ಪ್ರಶ್ನಿಸಬಹುದು ಎಂದು ಪ್ರಬಲ ವಾದ ಮಂಡಿಸಿದರು.

ವಾದ ಆಲಿಸಿದ ನ್ಯಾ. ನಾಗಪ್ರಸನ್ನ, ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಹಂತದಲ್ಲಿ ಆರೋಪಿಗಳು ಪ್ರಶ್ನೆ ಮಾಡುವಂತಿಲ್ಲ. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಲು ಯಾವುದೇ ಕಾರಣವಿಲ್ಲ ಎಂದಿತಲ್ಲದೇ, ದರ್ಶನ್ ಪರ ವಕೀಲರ ವಾದ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿತು. ಅಲ್ಲದೇ ʻಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಹಂತದಲ್ಲಿ ಆರೋಪಿಗಳ ಪ್ರಶ್ನೆಗಳಿಗೆ ಅವಕಾಶವಿಲ್ಲ. ಈ ಕುರಿತು ಯಾವುದೇ ನ್ಯಾಯಾಲಯದ ಆದೇಶವಿದ್ದರೆ ತೋರಿಸಿʼ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಯಾಗಿ ಹಷ್ಮತ್ ಪಾಷಾ ಅವರು, ನೈಸರ್ಗಿಕ ನ್ಯಾಯದ ತತ್ವದ ಪ್ರಕಾರ ಸೆಷನ್ಸ್ ಕೋರ್ಟ್ ತಮ್ಮ ವಾದವನ್ನ ಆಲಿಸಬೇಕು ಎಂದು ವಾದಿಸಿದರು. ಪ್ರದೋಷ್ 2 ವರ್ಷಗಳ ಕಾಲ ಸುಮ್ಮನಿದ್ದು ಇದೀಗ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂಬ ಅಂಶವನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ದರ್ಶನ್ ಕೋರ್ಟ್‌ಗೆ ಖುದ್ದು ಹಾಜರಿ ವಿಚಾರವೂ ಮುಂದುವರಿಕೆ
ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕೋರ್ಟ್‌ಗೆ ಖುದ್ದು ಹಾಜರಾಗುವ ವಿಚಾರವೂ ವಿಚಾರಣೆಗೆ ಬಂದಿದೆ. ಈ ಬಗ್ಗೆ ಸೋಮವಾರ ಆದೇಶ ನೀಡುವುದಾಗಿ ಕೋರ್ಟ್ ತಿಳಿಸಿದೆ. ಹೀಗಾಗಿ ಸೋಮವಾರ ದರ್ಶನ್ ಖುದ್ದು ಹಾಜರಾಗಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸ್ಪಷ್ಟತೆ ಸಿಗಲಿದೆ.

ಪವಿತ್ರಾಗೌಡ ತಡವಾಗಿ ಹಾಜರಾದ ಬಗ್ಗೆ ನ್ಯಾಯಾಧೀಶರ ಪ್ರಶ್ನೆ
ವಿಚಾರಣೆ ವೇಳೆ ಆರೋಪಿ ಪವಿತ್ರಾಗೌಡ ತಡವಾಗಿ ಹಾಜರಾದ ವಿಚಾರವೂ ನ್ಯಾಯಾಲಯದ ಗಮನಕ್ಕೆ ಬಂದಿದೆ. ಈ ವೇಳೆ ನ್ಯಾಯಾಧೀಶೆ ಸುಜಾತಾ ಎಂ. ಮಡಿವಾಳಪ್ಪ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ʻಪವಿತ್ರಾಗೌಡ ಲೇಟಾಗಿ ಹಾಜರಾಗಿದ್ದೇಕೆ? ಯಾಕೆ ತಡವಾಯಿತು? ಹೆಡ್‌ಫೋನ್‌ ಯಾಕೆ ಬಳಸುತ್ತಿದ್ದಾರೆ? ಯಾರು ಪರ್ಮಿಷನ್ ಕೊಟ್ಟರು? ವುಮೆನ್ಸ್ ಸೆಲ್‌ನಲ್ಲಿ ಹೆಡ್‌ಫೋನ್‌ಗಳನ್ನು ಕೊಡುತ್ತಾರಾ?ʼ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಪವಿತ್ರಾಗೌಡ ಅವರು ತಾವು ಹೆಡ್‌ಫೋನ್ ಬಳಸಿಲ್ಲ ಎಂದು ಉತ್ತರಿಸಿದರು. ಆದರೆ, ʻನಾನು ನೋಡಿದ್ದೇನೆʼ ಎಂದು ನ್ಯಾಯಾಧೀಶೆ ತಿಳಿಸಿದರು. ಈ ಕುರಿತು ಜೈಲಾಧಿಕಾರಿಗಳಿಂದ ಸ್ಪಷ್ಟೀಕರಣ ಪಡೆಯುವಂತೆ ಸೂಚಿಸಲಾಯಿತು.


Spread the love

About Laxminews 24x7

Check Also

ಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆ

Spread the loveಮಂಗಳೂರು: ಬಂಟ್ವಾಳದ  ನರಿಕೊಂಬು  ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಸಿಲುಕಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ