ಕೋಲ್ಕತ್ತಾ: ಕಾರು ಡ್ರೈವಿಂಗ್ ಅಭ್ಯಾಸ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರೊಂದು ಕೆರೆಗೆ ಉರುಳಿದ ಪರಿಣಾಮ 42 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತಾದ ಕೆಸ್ತೋಪುರದ ಪ್ರಫುಲ್ಲ ಕಾನನ್ (ಪಶ್ಚಿಮ) ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಸುಮಿತ್ರಾ ದಾಸ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಸುಮಿತ್ರಾ ಅವರು ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಶಾಲೆಗೆ ಬಿಟ್ಟು ಮನೆಗೆ ವಾಪಸ್ ಆಗಿದ್ದರು. ಮನೆಗೆ ಬಂದ ಬಳಿಕ ಸ್ಕೂಟರ್‌ನ್ನು ನಿಲ್ಲಿಸಿ, ಗ್ಯಾರೇಜ್‌ನಲ್ಲಿದ್ದ ತಮ್ಮ ಪತಿ ಖರೀದಿಸಿದ್ದ ಹ್ಯುಂಡೈ ಇಯಾನ್ ಕಾರನ್ನು ಹೊರತೆಗೆದಿದ್ದಾರೆ. ಬಳಿಕ ಡ್ರೈವಿಂಗ್ ಅಭ್ಯಾಸ ಮಾಡಲು ಕಾರಿನಲ್ಲಿ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಸಮೀಪದ ಕೆರೆಗೆ ಬಿದ್ದಿದೆ.
ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಸುಮಿತ್ರಾ ಅವರನ್ನು ರಕ್ಷಿಸಲು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಕಾರನ್ನು ಕೆರೆಯಿಂದ ಹೊರತೆಗೆಯಲಾಯಿತು.
ಕಾರನ್ನು ನೀರಿನಿಂದ ಹೊರತೆಗೆದಾಗ ಸುಮಿತ್ರಾ ಅವರ ಮೃತದೇಹ ಕಾರಿನೊಳಗೆ ಪತ್ತೆಯಾಗಿದೆ. ಅವರ ಮುಖ ಕಾರಿನ ಹಿಂಭಾಗದ ಹ್ಯಾಚ್‌ಬಾಗಿಲಿನತ್ತ ಹಾಗೂ ಕಾಲುಗಳು ಸ್ಟೀರಿಂಗ್ ಬಳಿಯಲ್ಲಿದ್ದವು. ಇದರಿಂದ ಕಾರು ನೀರಿನಲ್ಲಿ ಮುಳುಗುತ್ತಿದ್ದ ಸಂದರ್ಭದಲ್ಲಿ ಅವರು ಹೊರಬರಲು ಪ್ರಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸುಮಿತ್ರಾ ಅವರ ಪತಿ ಕೃಷ್ಣೇಂದು ದಾಸ್ ಇತ್ತೀಚೆಗಷ್ಟೇ ಈ ಕಾರನ್ನು ಖರೀದಿಸಿದ್ದರು. ಆಗಸ್ಟ್ 22ರಂದು ನಡೆಯಲಿದ್ದ ಚಾಲನಾ ಪರವಾನಗಿ ಪರೀಕ್ಷೆಗೆ ಸುಮಿತ್ರಾ ಸಿದ್ಧತೆ ನಡೆಸುತ್ತಿದ್ದರು. ಚಾಲನೆಯಲ್ಲಿ ಇನ್ನೂ ಪರಿಣತಿ ಹೊಂದಿರದ ಸುಮಿತ್ರಾ ಅವರು, ಬ್ರೇಕ್ ಬದಲು ತಪ್ಪಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ಕಾರು ವೇಗವಾಗಿ ಚಲಿಸಿ ಕೆರೆಯ ಮಧ್ಯಭಾಗಕ್ಕೆ ನುಗ್ಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
Laxmi News 24×7