ಹಾವೇರಿ: ಶ್ರಾವಣ ಮಾಸದ ಅಮವಾಸ್ಯೆಯಂದು ಬಸವೇಶ್ವರ ಪೂಜೆ ನೀರು ತರಲು ಹೋಗಿದ್ದ ವ್ಯಕ್ತಿ ವರದಾ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳಗಟ್ಟಿ ಗ್ರಾಮದ ಬಳಿ ನಡೆದಿದೆ.
ಸವಣೂರು ಪಟ್ಟಣದ ಹೊರಕೇರಿ ಓಣಿಯ ನಿವಾಸಿಯಾದ ಬಸವರಾಜ್ ಪುಟ್ಟಪ್ಪ ಕೆಮ್ಮನಕೇರಿ (43) ವ್ಯಕ್ತಿ. ಐವರು ಸೇರಿಕೊಂಡು ಸವಣೂರಿನಿಂದ ಬಸವೇಶ್ವರ ಮೂರ್ತಿಯ ಪೂಜೆಗೆ ನೀರು ತರಲು ವರದಾ ನದಿಗೆ ತೆರಳಿದ್ದರು. ಈ ವೇಳೆ ಇತರರು ಮುಂದೆ ಸಾಗಿದ್ದಾಗ, ಬಸವರಾಜ್ ಅವರು ನದಿಯಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಹುಡುಕಾಟ ಕಾರ್ಯ ಆರಂಭಿಸಿದ್ದಾರೆ. ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ.
Laxmi News 24×7