ಖಾನಾಪುರ: ಹಲಸಿ-ಬೇಕವಾಡ ರಸ್ತೆ ತಗ್ಗು-ಗುಂಡಿಮಯ; ಆಕ್ರೋಶಗೊಂಡ ಗ್ರಾಮಸ್ಥರು!
ಖಾನಾಪುರ ತಾಲೂಕಿನ ಐತಿಹಾಸಿಕ ಹಲಸಿ ಮತ್ತು ಬೇಕವಾಡ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ತಗ್ಗು-ಗುಂಡಿಗಳಿಂದ ಆವೃತವಾಗಿದ್ದು, ಸಾರ್ವಜನಿಕರು ಹಾಗೂ ಶ್ರಾವಣ ಮಾಸದಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೌನದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಹಲಸಿ ಗ್ರಾಮಕ್ಕೆ ಪ್ರತಿದಿನ ನೂರಾರು ಜನರು ಸಂಚರಿಸುತ್ತಾರೆ. ಪ್ರಸ್ತುತ ಶ್ರಾವಣ ಮಾಸದ ಪೂಜಾ-ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಅಪಾರ ಸಂಖ್ಯೆಯ ಭಕ್ತರು ಹಲಸಿ-ಬೇಕವಾಡ ರಸ್ತೆಯ ಮೂಲಕವೇ ಪ್ರಯಾಣಿಸಬೇಕಾಗಿದೆ. ಆದರೆ, ರಸ್ತೆಯ ತುಂಬಾ ಬಿದ್ದಿರುವ ಬೃಹತ್ ಗುಂಡಿಗಳಿಂದಾಗಿ ಇದು ರಸ್ತೆಯೋ ಅಥವಾ ತಗ್ಗೋ ತಿಳಿಯದಂತಾಗಿದೆ. ಚುನಾವಣೆ ವೇಳೆ ಪ್ರಚಂಡ ಬಹುಮತದಿಂದ ಗೆದ್ದು ಹೋದ ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಮತದಾರರು ಹಿಡಿಶಾಪ ಹಾಕುತ್ತಿದ್ದಾರೆ. ತಕ್ಷಣವೇ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ಹೋರಾಟ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
Laxmi News 24×7