ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆದಂಡವಾಗಿದ್ದ ಮೂವರು ಐಪಿಎಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮೂವರು ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯನ್ನು ಸರ್ಕಾರ ಕೈಬಿಟ್ಟಿದೆ.
ಈ ಹಿಂದೆ ಪ್ರಕರಣ ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆದಿದ್ದ ಸರ್ಕಾರ, ಬಳಿಕ ಇಲಾಖಾ ತನಿಖೆಗೆ ಆದೇಶಿಸಿತ್ತು. ಅದರಂತೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಅವರಿಂದ ಲಿಖಿತ ಹಾಗೂ ಮೌಖಿಕ ವಿವರಣೆ ಪಡೆಯಲಾಗಿತ್ತು.
ವಿಚಾರಣೆ ವೇಳೆ ತಮ್ಮ ವಿರುದ್ಧದ ಆರೋಪಗಳನ್ನು ಮೂವರು ಅಧಿಕಾರಿಗಳು ಸಂಪೂರ್ಣವಾಗಿ ತಳ್ಳಿ ಹಾಕಿದ್ದರು. ಘಟನೆಗೆ ತಾವು ನೇರವಾಗಿ ಹೊಣೆಗಾರರಲ್ಲ ಎಂದು ಸಮರ್ಥಿಸಿಕೊಂಡಿದ್ದ ಅವರು, ತಮ್ಮ ಕರ್ತವ್ಯ ನಿರ್ವಹಣೆಯ ಕುರಿತು ವಿವರವಾದ ಸ್ಪಷ್ಟೀಕರಣ ಮತ್ತು ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಅಧಿಕಾರಿಗಳ ಹೇಳಿಕೆ, ಸಲ್ಲಿಸಿದ ದಾಖಲೆಗಳು ಹಾಗೂ ಅವರ ಮನವಿಯನ್ನು ಪರಿಶೀಲಿಸಿದ ಬಳಿಕ, ಇಲಾಖಾ ತನಿಖೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಇದರ ಆಧಾರದ ಮೇಲೆ ಮೂವರು ಐಪಿಎಸ್ ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯನ್ನು ಅಧಿಕೃತವಾಗಿ ಕೈಬಿಡಲಾಗಿದೆ.
Laxmi News 24×7