Breaking News

ಬೀಳಗಿಯಲ್ಲಿ ₹43.40 ಲಕ್ಷಕ್ಕೂ ಅಧಿಕ ಹಣ ವಂಚನೆ ; ಇಬ್ಬರು ಆರೋಪಿಗಳ ಬಂಧನ

Spread the love

ಬಾಗಲಕೋಟೆ ಜಿಲ್ಲೆ ಬಿಳಗಿ ಪೊಲೀಸ್ ಠಾಣೆಯಲ್ಲಿ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಿರುದ್ಧ ಸಾರ್ವಜನಿಕರಿಗೆ ಆಕರ್ಷಕ ಲಾಭಾಂಶದ ಭರವಸೆ ನೀಡಿ ಹಣ ಸಂಗ್ರಹಿಸಿ ವಂಚನೆ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಸಂಸ್ಥೆಯು ವಿವಿಧ ಮುಖಬೆಲೆಯ ಯೋಜನೆಗಳ ಮೂಲಕ, ವಿಶೇಷವಾಗಿ ಮಹಿಳೆಯರನ್ನು ಸಣ್ಣ-ಸಣ್ಣ ಗುಂಪುಗಳಾಗಿ ಸೇರಿಸಿ, ಮೂರು ವರ್ಷಗಳ ನಂತರ ಹೆಚ್ಚಿನ ಹಣ ಮರಳಿ ನೀಡುವುದಾಗಿ ಭರವಸೆ ನೀಡಿ ವಾರದ/ತಿಂಗಳ ಕಂತುಗಳ ರೂಪದಲ್ಲಿ ಹಣ ಸಂಗ್ರಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಂಸ್ಥೆಯ ಭರವಸೆಯನ್ನು ನಂಬಿ ಅನೇಕ ಮಹಿಳೆಯರು ತಮ್ಮ ದುಡಿಮೆ ಹಣವನ್ನು ಹೂಡಿಕೆ ಮಾಡಿದ್ದರು.

ಸಂತ್ರಸ್ತರ ದೂರಿನ ಮೇರೆಗೆ ಬಿಳಗಿ ಪೊಲೀಸ್ ಠಾಣೆಯಲ್ಲಿ *ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316(5), 318(4) ಹಾಗೂ 351(2)*ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ತನಿಖೆಯ ಭಾಗವಾಗಿ ಇಂದು ಸಂಸ್ಥೆಯ ಕಚೇರಿಯ ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 200ಕ್ಕೂ ಹೆಚ್ಚು ರಿಜಿಸ್ಟರ್‌ಗಳು, ರಸೀದಿ ಪುಸ್ತಕಗಳು, ಕಂಪ್ಯೂಟರ್‌ಗಳು ಹಾಗೂ ಇತರೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆಗೆ ಒಳಪಡಿಸಲಾಗಿದೆ. ಇದೇ ವೇಳೆ ಸಹಕಾರ ಸಂಘಗಳ ಜಿಲ್ಲಾ ನಿಬಂಧಕರೂ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಇಲ್ಲಿಯವರೆಗೆ ವಶಪಡಿಸಿಕೊಂಡ ದಾಖಲೆಗಳು ಹಾಗೂ ಸಂತ್ರಸ್ತರಿಂದ ದಾಖಲಿಸಿಕೊಂಡಿರುವ ಹೇಳಿಕೆಗಳ ಆಧಾರದ ಮೇಲೆ, ಪ್ರಾಥಮಿಕವಾಗಿ ಸುಮಾರು ₹43.40 ಲಕ್ಷದ ವಂಚನೆ ನಡೆದಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಸಂಸ್ಥೆಯ ಲೆಕ್ಕಪರಿಶೋಧಕ (ಆಡಿಟರ್) ಸೇರಿದಂತೆ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೆ 8 ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರಲ್ಲಿ 2 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದಲ್ಲಿ ವಂಚನೆಯಾದ ಒಟ್ಟು ಹಣದ ಪ್ರಮಾಣ, ಇನ್ನಷ್ಟು ಸಂತ್ರಸ್ತರ ಮಾಹಿತಿ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಸಮಗ್ರ ತನಿಖೆ ಮುಂದುವರಿದಿದೆ.

ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವ ಸಾರ್ವಜನಿಕರು ತಮ್ಮ ಬಳಿ ಇರುವ ರಸೀದಿಗಳು, ಪಾಸ್‌ಬುಕ್, ಠೇವಣಿ ದಾಖಲೆಗಳು ಹಾಗೂ ಇತರೆ ಸಂಬಂಧಿತ ದಾಖಲೆಗಳೊಂದಿಗೆ ಬಿಳಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನಿಖೆಗೆ ಸಹಕರಿಸುವಂತೆ ಕೋರಲಾಗಿದೆ.

ಸಾರ್ವಜನಿಕರು ಯಾವುದೇ ಸಂಸ್ಥೆ ಅಥವಾ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಅದರ ನೋಂದಣಿ, ಕಾನೂನುಬದ್ಧತೆ ಹಾಗೂ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ಅಸಾಮಾನ್ಯ ಅಥವಾ ಖಚಿತ ಹೆಚ್ಚಿನ ಲಾಭದ ಭರವಸೆ ನೀಡುವ ಯೋಜನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ


Spread the love

About Laxminews 24x7

Check Also

ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉಗ್ರನಿಗೆ 7 ವರ್ಷ ಜೈಲು ಶಿಕ್ಷೆ

Spread the loveಬೆಂಗಳೂರು: ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉಗ್ರನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಎನ್‌ಐಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ